ಸಾವಿನಲ್ಲಿ ಒಂದಾದ ಅಣ್ಣ-ತಮ್ಮ: ಅಯ್ಯೋ ದುರ್ವಿಧಿಯೇ! ಮತ್ತೊಬ್ಬ ಸಹೋದರನೂ ಆಸ್ಪತ್ರೆಯಲ್ಲಿ!

anna tamma
Published on

ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸಹೋದರಿಬ್ಬರು ಸಾವಿನಲ್ಲಿ ಒಂದಾದ ದುರಂತ ಘಟನೆ ನಡೆದಿದೆ. ಕೆ.ಸಿದ್ದೇಶ (22) ಎನ್ನುವ ಯುವಕ ಕೈಗಾರಿಕೆ ಇಂಡಷ್ಟ್ರಿಯೊಂದರಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ, ಬಿಪಿ ಜಾಸ್ತಿಯಾಗಿ ಸಿದ್ದೇಶ ಮೃತಪಟ್ಟಿದ್ದಾನೆ.

ಈ ಸುದ್ದಿ ತಿಳಿದ ಬೆಂಗಳೂರಿನಲ್ಲಿ ಇಂಜಿನಿಯರ್​ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರ ದೊಡ್ಡಬಸವ (25) ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ್ದಾನೆ. ತಮ್ಮನ ವಿಧಿ-ವಿಧಾನ ಕಾರ್ಯ ಮುಗಿಯುವರೆಗೂ ಜತೆಗಿದ್ದು, ಸ್ಮಶಾನದಿಂದ ಮರಳಿ ಮನೆಗೆ ಬರುವ ಸಮಯದಲ್ಲಿ ಈ ಯುವಕನಿಗೆ ಹೃದಯಘಾತವಾಗಿದೆ. ಬಳ್ಳಾರಿಯ ವಿಮ್ಸ್​ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಗ್ರಾಮದ ಬಸಪ್ಪ ಮತ್ತು ದುರ್ಗಮ್ಮ ದಂಪತಿಗಳ ಮಕ್ಕಳಾಗಿದ್ದು, ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಇವರ ಹಿರಿಯ ಮಗ ಕೆಂಚಪ್ಪ ಎಂಬಂತಾನು ತಮ್ಮಂದಿರನ್ನು ಕಳೆದುಕೊಂಡಿರುವ ದು:ಖದಲ್ಲಿ ಚಿಂತಾಕ್ರಾಂತನಾಗಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದು, ಈತನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ. ಅದರಲ್ಲೂ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ವ್ಯವಸಾಯ ನಂಬಿ ಜೀವನ ಸಾಗಿಸುತ್ತಿರುವ ಈ ದಂಪತಿಗೆ ಮಕ್ಕಳೇ ಆಧಾರವಾಗಿದ್ದರು. ಆದರೆ, ಜವರಾಯ ಮೂವರು ಸಹೋದರಲ್ಲಿ ಇಬ್ಬರನ್ನು ಒಂದೇ ದಿನ ಬಲಿ ಪಡೆದು ಕುಟುಂಬಕ್ಕೆ ಆಘಾತ ನೀಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net