

ಮಂಡ್ಯ: ಬಕ್ರೀದ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಬ್ಬ ಆಚರಿಸುವವರು ಕುರಿ ವ್ಯಾಪಾರದಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗ ಜೋಡಿ ಟಗರುಗಳು ಬರೋಬ್ಬರಿ 1.25 ಲಕ್ಷ ರೂಪಾಯಿಗೆ ಮಾರಾಟವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಸೂನಗನಹಳ್ಳಿಯಲ್ಲಿ ಈ ರೀತಿಯ ಟಗರು ಮಾರಾಟ ಮಾಡಲಾಗಿದೆ. ರೈತ ಶಂಭು ಎನ್ನುವವರು ಒಂದು ವರ್ಷದಿಂದ ಎರಡು ಬಂಡೂರು ಕುರಿಗಳನ್ನು ಸಾಕಿದ್ದರು. ಅತ್ಯಂತ ಪ್ರೀತಿಯಿಂದ ಸಾಕಿದ್ದ ಆ ಟಗರುಗಳು ಒಂದೊಂದು ತಲಾ 80 ಕೆಜಿ ತೂಕದಷ್ಟು ಬೆಳೆದಿದ್ದವಂತೆ. ಎರಡನ್ನೂ ಸೇರಿ ಬರೋಬ್ಬರಿ 160 ಕೆಜಿ ತೂಕವಿತ್ತಂತೆ.
ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ ಎನ್ನುವವರು ಜೋಡಿ ಟಗರನ್ನು ಖರೀದಿಸಿದ್ದಾರೆ. ಕುರಿ ಚೆನ್ನಾಗಿ ಸಾಕಿರುವುದಕ್ಕೆ ಶಂಭುವಿಗೆ ಅಭಿನಂದಿಸಿ ಪ್ರಶಸ್ತಿಯನ್ನು ಕೊಟ್ಟು, ಕೇಕ್ ಕತ್ತರಿಸಿ ಟಗರನ್ನು ಕೊಂಡೊಯ್ಯಲಾಗಿದೆ.