ಸರ್ಕಾರಿ ನೌಕರಿಯ ನಕಲಿ ಆದೇಶ ಪತ್ರ: ಇಬ್ಬರ ಬಂಧನ

police (3)
Published on

ಕಲಬುರಗಿ: ಅಮಾಯಕರು, ಅನರಸ್ಥರನ್ನು ಗುರಿಯಾಗಿಸಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ಆದೇಶ ಪತ್ರ ಮೊಬೈಲ್​ನಲ್ಲೇ ತಯಾರಿಸಿ ವಂಚಿಸುತ್ತಿದ್ದ ಜಾಲ ಭೇದಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

ಮಹಾರಾಷ್ಟ್ರದ ಸೊಲ್ಲಾಪುರ, ಪುಣೆಯಲ್ಲಿ ಕುಳಿತು ರಾಜ್ಯದ ವಿವಿಧ ಜಿಲ್ಲೆ ಅಮಾಯಕರನ್ನು ಸಂಪರ್ಕಿಸಿ ವಿವಿಧ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ನಕಲಿ ಆದೇಶ ಪತ್ರ ನೀಡಿ ವಂಚಿಸುತ್ತಿದ್ದ ಕಲಬುರಗಿ ಜಿಲ್ಲೆ ಮೇಳಕುಂದಾ(ಬಿ) ಗ್ರಾಮದ 4ನೇ ತರಗತಿ ಓದಿದ ನಾಗೇಶ ಸುಂಕನ್​ ಮತ್ತು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಗುರ್ಲಹೊಸೂರಿನ ರಾಮಪುರ ಸೈಟ್​ ನಿವಾಸಿ ಐಟಿಐ ಅಭ್ಯಸಿಸಿದ ಅಭಿಷೇಕ ಮಾತಾಡೆ ಅವರನ್ನು ಸೊಲ್ಲಾಪುರದಲ್ಲಿ ಬಂಧಿಸಲಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತ ನಾಗೇಶನಿಂದ ಎರಡು ಮೊಬೈಲ್​, ಎರಡು ಸಿಮ್​ ಕಾರ್ಡ್​, 10 ಬಯೋಡಾಟಾ, ಕಂದಾಯ ಇಲಾಖೆ, ಆದಾಯ ತೆರಿಗೆ, ರೈಲ್ವೆ, ಅಬಕಾರಿ, ಸಮಾಜ ಕಲ್ಯಾಣ, ಪಂಚಾಯತ್​ ರಾಜ್​, ವಾಣಿಜ್ಯ ತೆರಿಗೆ ಮತ್ತು ಆರೋಗ್ಯ ಇಲಾಖೆಯ 43 ನಕಲಿ ನೇಮಕ ಆದೇಶ ಪ್ರತಿ ಹಾಗೂ 25,000 ರೂ. ನಗದು ಜಪ್ತಿ ಮಾಡಲಾಗಿದೆ. ಅಭಿಷೇಕನಿಂದ 11 ನಕಲಿ ಆದೇಶ ಪ್ರತಿ, ಎರಡು ಮೊಬೈಲ್​ ಮತ್ತು 22,000 ರೂ. ವಶಪಡಿಸಿಕೊಂಡು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.

ನಕಲಿ ಆದೇಶಪತ್ರ ಸೃಷ್ಟಿ ಪ್ರಕರಣ ಭೇದಿಸಿದ ಸೆನ್​ ಠಾಣೆ ಡಿವೈಎಸ್​ಪಿ ಬಸವೇಶ್ವರ ಹೀರಾ, ತನಿಖಾಧಿಕಾರಿ ಪಿ.ಐ.ವನಂಜಕರ, ಮಹಿಳಾ ಠಾಣೆ ಪಿಐ ಜಗದೀಶ ನೇತೃತ್ವದ ಎರಡು ತಂಡದಲ್ಲಿದ್ದ ಪೇದೆಗಳಾದ ಶ್ರೀಶೈಲ, ಸಿದ್ದಪ್ಪ ಪೂಜಾರಿ, ಮಹಾಂತಯ್ಯ, ಉದಯಕುಮಾರ, ಬಲರಾಮ ಹಾಗೂ ಸಿಡಿಆರ್​ ಘಟಕದ ಪೇದೆಗಳಾದ ಅಶೋಕ, ನಾಗೇಂದ್ರ, ಉಮೇಶ, ಸಿದ್ದು ಪಾಟೀಲ್​, ನಾಗೇಶ ಮಹಿಳಾ ಠಾಣೆ ಸಿಬ್ಬಂದಿ ನಾರಾಯಣ, ವಿಠ್ಠಲ್​, ಮಲ್ಲಿಕಾರ್ಜುನ ಕಾರ್ಯವನ್ನು ಶ್ಲಾಸಿದರು.

ಡಿವೈಎಸ್​ಪಿ ಮಹೇಶ ಮೇಘಣ್ಣನವರ, ಡಿವೈಎಸ್​ಪಿ ಬಸವೇಶ್ವರ ಹೀರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net