ರಾಜಧಾನಿಯಲ್ಲಿವೆ 2.79 ಲಕ್ಷ ಸ್ಟ್ರೀಟ್ ಡಾಗ್ಸ್

streetdogs (1)
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2.79 ಲಕ್ಷ ಬೀದಿನಾಯಿಗಳಿವೆ. ನಾಲ್ಕು ವರ್ಷಗಳ ಬಳಿಕ ಕೈಗೊಳ್ಳಲಾದ ಸಮೀಕ್ಷೆ ಅನ್ವಯ ಹಿಂದಿನ ಸರ್ವೆಗಿಂತ (2019ರಲ್ಲಿ 3.09 ಲಕ್ಷ) ಶೇ.10 ಪ್ರಮಾಣದ ಸ್ಟ್ರೀಟ್ ಡಾಗ್ಸ್ ಕಡಿಮೆಯಾಗಿದೆ.

ವಿಶೇಷವೆಂದರೆ ಐಟಿ ಕಾರಿಡಾರ್ ಇರುವ ಮಹದೇವಪುರ ವಲಯದಲ್ಲೇ ಅತಿ ಹೆಚ್ಚು ಬೀದಿನಾಯಿಗಳಿಗಳುರುವುದು ದೃಢಪಟ್ಟಿದೆ. ಹಳೆಯ ವಲಯಗಳಿಗಿಂತ ಹೊಸ ವಲಯಗಳಲ್ಲಿ ಬೀದಿನಾಯಿಗಳು ಹೆಚ್ಚಿದ್ದರೂ, ದಾಸರಹಳ್ಳಿ ವಲಯಲ್ಲಿ ಮಾತ್ರ ಕನಿಷ್ಠ ಪ್ರಮಾಣದಲ್ಲಿವೆ. ಒಟ್ಟಾರೆ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ನಾಯಿಕಡಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಈ ವರ್ಷದ ಜು.11ರಿಂದ ಆ.2ರ ವರೆಗೆ ಸರ್ವೆಯನ್ನು ಕೈಗೊಳ್ಳಲಾಗಿದೆ. ಬಿಬಿಎಂಪಿ ಪಶುಪಾಲನಾ ವಿಭಾಗ, ಕೇಂದ್ರ ಸರ್ಕಾರದ ಐಸಿಎಆರ್-ನಿವೇದಿ, ಡಬ್ಲುೃವಿಎಸ್ ರೇಬೀಸ್ ಮಿಷನ್ ಹಾಗೂ ರಾಜ್ಯ ಪಶುಪಾಲನಾ ಇಲಾಖೆಯ ಜಂಟಿ ಸಹಯೋಗದಲ್ಲಿ ಸರ್ವೆ ನಡೆಸಲಾಗಿದೆ. ಈ ಸಮೀಕ್ಷೆಯ ಅಧಿಕೃತ ವರದಿಯನ್ನು ಬಿಬಿಎಂಪಿ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಅವರು ಮಂಗಳವಾರ ವರದಿಯನ್ನು ಬಿಡುಗಡೆಗೊಳಿಸಿದರು.

ಸಮೀಕ್ಷೆಗೆ 50 ತಂಡಗಳಲ್ಲಿ ಕೆಲಸ:

ಬಿಬಿಎಂಪಿಯ ಎಲ್ಲ 8 ವಲಯಗಳಲ್ಲಿನ 243 ವಾರ್ಡ್‌ಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಇದಕ್ಕಾಗಿ 100 ಸಮೀಕ್ಷೆದಾರು ಹಾಗೂ 15 ಮೇಲ್ವಿಚಾರಕರು ಒಳಗೊಂಡ 50 ತಂಡಗಳನ್ನು ರಚಿಸಲಾಗಿತ್ತು. ಹನ್ನೆರಡು ದಿನಗಳ ಕಾಲ ವಸತಿ ಪ್ರದೇಶ, ಕೊಳಚೆ ಪ್ರದೇಶ, ಕೆರೆಗಳ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶವನ್ನು 0.5 ಚ.ಕಿ.ಮೀ. ವ್ಯಾಪ್ತಿಯ 6,850 ಉಪ ವಲಯಗಳನ್ನಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ಶೇ.20 ರ‌್ಯಾಂಡಂ ಸ್ಯಾಂಪಲ್‌ಗಳನ್ನು ಅಂದರೆ 1,360 ಉಪ ವಲಯಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿರುತ್ತದೆ. ಈ ಬಾರಿ ಬೀದಿ ನಾಯಿಗಳ ಸಮೀಕ್ಷೆಯನ್ನು ಕ್ರಮಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಿರುವುದರಿಂದ ದತ್ತಾಂಶ ಶೇ.98 ನಿಖರವಾಗಿದೆ ಎಂದು ಡಾ. ತ್ರಿಲೋಕ್ ಚಂದ್ರ ತಿಳಿಸಿದರು.

ಶೇ.71 ಶ್ವಾನಗಳಿಗೆ ಸಂತಾನಹರಣ ಶಸಚಿಕಿತ್ಸೆ:

ಸಮೀಕ್ಷೆಯಲ್ಲಿ ಪಾಲಿಕೆಯ 8 ವಲಯಗಳಲ್ಲಿ ಒಟ್ಟು 2.79 ಲಕ್ಷ ಬೀದಿನಾಯಿಗಳನ್ನು ಗುರುತಿಸಲಾಗಿದೆ. ಇವುಗಳ ಸಂಖ್ಯೆ 2019ರಲ್ಲಿ 3.10 ಲಕ್ಷದಷ್ಟಿತ್ತು. ಸರ್ವೆಗೆ ಮುನ್ನ ಶೇ.51.16 ಬೀದಿನಾಯಿಗಳಿಗೆ ಸಂತಾನಹರಣ ಶಸಚಿಕಿತ್ಸೆ ಆಗಿರಬಹುದೆಂದು ಅಂದಾಜಿಸಿದ್ದರೂ, ಶೇ.71.85 ಪ್ರಮಾಣದಷ್ಟು ಸಂತಾನಹರಣ ಶಸಚಿಕಿತ್ಸೆಯಾಗಿರುವುದು ದೃಢಪಟ್ಟಿದೆ. ಶೇ.20 ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿದೆ. ಮರಿಗಳ ಸಂಖ್ಯೆಯು ಕಡಿಮೆಯಾಗಿರುವುದು ವಿಶೇಷ.

ಡ್ರೋನ್ ಮೂಲಕ ಸರ್ವೆ:

ಬೀದಿನಾಯಿಗಳ ಸಮೀಕ್ಷೆಯನ್ನು ಡ್ರೋನ್ ಮೂಲಕ ನಡೆಸಿದ್ದು ದೇಶದಲ್ಲೇ ಮೊದಲು. ಇದರಿಂದ ಕಡಿಮೆ ಅವಧಿಯಲ್ಲಿ ವೈಜ್ಞಾನಿಕವಾಗಿ ಸರ್ವೆ ಕಾರ್ಯ ನಡೆಸಲು ಅವಕಾಶವಾಯಿತು. ಸಮೀಕ್ಷೆ ನಡೆಸಿದ ತಂಡಗಳಿಗೆ ಆಯಾ ಪ್ರದೇಶಗಳಲ್ಲಿದ್ದ ಶ್ವಾನಗಳು ಬೇರೆಡೆ ತೆರಳಿದರೂ, ಅಲ್ಲಿನ ಚಿತ್ರಗಳನ್ನು ಸೆರೆಹಿಡಿದಿದ್ದನ್ನು ತಾಳೇ ಹಾಕಿ ಮಾಹಿತಿ ಸಂಗ್ರಹಿಸಲಾಗಿದೆ. ಸಮೀಕ್ಷೆಗೆ ಸಿಎಸ್‌ಆರ್ ನಿಧಿಯನ್ನು ಬಳಸಿಕೊಳ್ಳಲಾಯಿತು. ಹಾಲಿ ಸರ್ವೆ ಆಧರಿಸಿ ರೇಬೀಸ್ ಚುಚ್ಚುಮದ್ದು ಹಾಗೂ ಬೀದಿನಾಯಿಗಳ ಸಂತಾನಹರಣ ಶಸಚಿಕಿತ್ಸೆ ನಡೆಸಲು ಶೀಘ್ರ ಟೆಂಡರ್ ಕರೆಯಲಿದ್ದೇವೆ ಎಂದು ಡಾ. ತ್ರೀಲೋಕ್‌ಚಂದ್ರ ತಿಳಿಸಿದರು.

ವಲಯವಾರು ಬೀದಿ ನಾಯಿಗಳ ವಿವರ:

ಮಹದೇವಪುರ 58,371

ಆರ್.ಆರ್.ನಗರ 41,266

ಬೊಮ್ಮನಹಳ್ಳಿ 39,183

ಪೂರ್ವ 37,685

ಯಲಹಂಕ 36,343

ದಕ್ಷಿಣ 23,241

ಪಶ್ಚಿಮ 22,025

ದಾಸರಹಳ್ಳಿ 21,221

ಒಟ್ಟು 2,79,335

ಎರಡೂ ಸರ್ವೆಗಳ ಮುಖ್ಯಾಂಶ:

ಶ್ವಾನ ವಿಧ 2019 2023

ಗಂಡು 2,05,660 1,65,341

ಹೆಣ್ಣು 1,04,316 82,757

ಒಟ್ಟು 3,09,898 2,79,335

ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದರಿಂದ ಬೀದಿನಾಯಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಸಮೀಕ್ಷೆಯಿಂದ ಮುಂದಿನ ದಿನಗಳಲ್ಲಿ ಪಾಲಿಕೆ 8 ವಲಯ/ವಾರ್ಡ್‌ಗಳಲ್ಲಿ ಬೀದಿನಾಯಿ ನಿಯಂತ್ರಣ ಮತ್ತು ಅವುಗಳಿಗೆ ಸಂಬಂದಿತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೀತಿ ರೂಪಿಸಲು ಸಹಕಾರಿಯಾಗಲಿದೆ.

- ಡಾ. ಕೆ.ಪಿ.ಸುರೇಶ್, ಸಮೀಕ್ಷೆಯ ಪ್ರಧಾನ ವಿಜ್ಞಾನಿ

ಬೀದಿನಾಯಿಗಳ ಕಡಿತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನು ಇರಬೇಕು. ಬೆಂಗಳೂರನ್ನು ರೇಬೀಸ್‌ಮುಕ್ತ ನಗರವಾಗಿಸಲು ಇನ್ನಷ್ಟು ಮುತುವರ್ಜಿ ಬೇಕಿದೆ.

- ಡಾ. ಬಲದೇವರಾಜ್ ಗುಲಾಟಿ, ಐಸಿಎಆರ್-ನಿವೇದಿ ಸಂಸ್ಥೆಯ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net