

ಹುಕ್ಕೇರಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಅರ್ಬನ್ ಸೌಹಾರ್ದ ಕ್ರೆಡಿಟ್ ಸಹಕಾರಿಯು 2 ಕೋಟಿ 78 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ರಾಮಣ್ಣ ಗೋಟೂರಿ ತಿಳಿಸಿದರು.
ಹುಲ್ಲೋಳಿ ಗ್ರಾಮದ ಸಹಕಾರಿ ಪ್ರಧಾನ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 21 ವರ್ಷಗಳ ಹಿಂದೆ ಗ್ರಾಮದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಸಹಕಾರಿ ಸಂಘ ಪ್ರಾರಂಭಿಸಲಾಯಿತು. ಸಂಘ ಇದೀಗ ಪ್ರಧಾನ ಕಚೇರಿ ಸೇರಿ 8 ಶಾಖೆಗಳನ್ನು ಹೊಂದಿದೆ ಎಂದರು. ಪ್ರಸ್ತುತ 144 ಕೋಟಿ 16 ಲಕ್ಷ ರೂ. ಠೇವಣಿ ಹೊಂದಿದೆ. ಸಹಕಾರಿ 98 ಕೋಟಿ ರೂ. ಸಾಲ ವಿತರಿಸಿದೆ.
ಆರ್ಥಿಕತೆ ಸಂಕಷ್ಟದಲ್ಲೂ ಗ್ರಾಹಕರ ಪ್ರಾಮಾಣಿಕತೆಯಿಂದ ಶೇ. 98ರಷ್ಟು ಸಾಲ ವಸೂಲಾತಿಯಾಗಿದೆ. ಒಟ್ಟು 838 ಕೋಟಿ 95 ಲಕ್ಷ ರೂ. ವಹಿವಾಟನ್ನು ನಡೆಸಿರುವುದಾಗಿ ಹೇಳಿದರು. ಪ್ರಸಕ್ತ ವರ್ಷ ಸದಸ್ಯರಿಗೆ ಶೇ. 25 ರಷ್ಟು ಲಾಭಾಂಶ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.
ಹಿರಿಯ ನಿರ್ದೇಶಕ ಪಿ.ಆರ್. ಚೌಗಲಾ ಮಾತನಾಡಿ, ಜಗತ್ತು ಕರೊನಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಅದನ್ನು ತಡೆಯಲು ಆಡಳಿತ ಮಂಡಳಿಯವರು ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ಸಿಬ್ಬಂದಿ ಸೇವಾ ಅವಧಿಯನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಸೀಮಿತಗೊಳಿಸಿದ್ದೇವೆ. ಸಿಬ್ಬಂದಿ ಮತ್ತು ಗ್ರಾಹಕರು, ಸದಸ್ಯರಿಗೆ ಸಹಕಾರಿಯಿಂದ ಉಚಿತ ಮಾಸ್ಕ ವಿತರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಲು ತಿಳಿಸಿಕೊಟ್ಟಿದ್ದೇವೆ ಎಂದರು.
ಉಪಾಧ್ಯಕ್ಷ ಭೂಪಾಲ ಚೌಗಲಾ, ನಿರ್ದೇಶಕರಾದ ಜಯಪಾಲ ಚೌಗಲಾ, ಜಿನ್ನಪ್ಪ ಸಪ್ತಸಾಗರ, ಪುಷ್ಪಾ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಪ್ರಕಾಶ ಚೌಗಲಾ, ಬಾಬು ಚೌಗಲಾ ಮತ್ತು ಸಿಬ್ಬಂದಿ ಇದ್ದರು. ರವೀಂದ್ರ ಚೌಗಲಾ ಸ್ವಾಗತಿಸಿದರು. ಅಜಿತ ಸಪ್ತಸಾಗರ ನಿರೂಪಿಸಿದರು. ಮಹಾವೀರ ಚೌಗಲಾ ವಂದಿಸಿದರು.