

ಲಿಂಗಸಗೂರು: ಕೃಷ್ಣಾ ನದಿ ಪ್ರವಾಹ ಇಳಿಮುಖವಾಗಿದ್ದು, ಬಸವಸಾಗರ ಜಲಾಶಯದಿಂದ ಸೋಮವಾರ ಕೃಷ್ಣಾ ನದಿಗೆ 30 ಕ್ರಸ್ಟ್ ಗೇಟ್ ಮೂಲಕ 2.77 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿರುವುದರಿಂದ ನದಿಗೆ ಹರಿಬಿಡುವ ನೀರಿನ ಪ್ರಮಾಣ ಕೊಂಚ ಇಳಿಮುಖವಾಗಿದೆ.
ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಿಂದ ಆಲಮಟ್ಟಿ ಅಣೆಕಟ್ಟೆಗೆ ಒಳ ಹರಿವು ಮುಂದುವರಿದಿದ್ದು ಬಸವಸಾಗರ ಜಲಾಶಯಕ್ಕೆ 2 ಲಕ್ಷ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜು.27ರಂದು ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ಮತ್ತು ಜು.28 ರಂದು 3 ಲಕ್ಷ 37ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಜು.30 ರಂದು ಮಂಗಳವಾರ ನದಿಗೆ ಹರಿಬಿಡುವ ನೀರಿನ ಪ್ರಮಾಣ 29ಸಾವಿರ ಕ್ಯೂಸೆಕ್‌ನಷ್ಟು ಇಳಿಮುಖವಾಗಿದೆ.
ಜಲಾಶಯದಲ್ಲಿ ಮಂಗಳವಾರದ ಗರಿಷ್ಟ ನೀರಿನ ಮಟ್ಟ 489.85 ಮೀ. (23.459 ಟಿ.ಎಂ.ಸಿ) ಕಾಯ್ದುಕೊಂಡು ಹೆಚ್ಚುವರಿ 2 ಲಕ್ಷ 77 ಸಾವಿರ 869 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು ಜಲಾಶಯದ ಗರಿಷ್ಠ ನೀರಿನ ಸಾಮರ್ಥ್ಯ 492.252 ಮೀ. (33.313 ಟಿಎಂಸಿ) ಇದೆ. ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಮುಂದುವರಿದಿದೆ. ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಇದರಿಂದ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಸಾರ್ವಜನಿಕರು ಬಾಹ್ಯ ಸಂಪರ್ಕ ಕಳೆದುಕೊಂಡಿದ್ದು, ತಾಲೂಕು ಕೇಂದ್ರ ತಲುಪಲು ಜಲದುರ್ಗ ಮಾರ್ಗವಾಗಿ 45 ಕಿಮೀ. ಸುತ್ತುವರಿದು ಬರಬೇಕಿದೆ.