ಜಿಲ್ಲೆಯ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ

24-hvr-03a
Published on

ಹಾವೇರಿ: ಕರೊನಾ 3ನೇ ಅಲೆಯಿಂದ ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ಕೆ ಗುರುವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಾಗೂ ಶಿಗ್ಗಾಂವಿ ತಾಲೂಕು ಅತ್ತಿಗೇರಿಯಲ್ಲಿ ಗುರುವಾರ ಮಕ್ಕಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಪಾಸಣೆಗೆ ಒಳಗಾದ ಎಲ್ಲ ಮಕ್ಕಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುವುದು. 3ನೇ ಅಲೆಯ ಪರಿಣಾಮ ಕ್ಷೀಣಿಸುವವರೆಗೂ ಅವರಿಗೆ ಅಗತ್ಯ ವೈದ್ಯಕೀಯ ಉಪಚಾರದ ನಿರ್ವಹಣೆಯ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ. ಇಂದಿನಿಂದ ಜುಲೈ 30ರೊಳಗಾಗಿ ಜಿಲ್ಲೆಯ 16 ವರ್ಷದೊಳಗಿನ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗುವುದು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಪಾಲಕರಿಗೂ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ವ್ಯಾಕ್ಸಿನ್ ಹಾಕಲು ಕ್ರಮವಹಿಸಲಾಗಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ರಕ್ಷಾ ಕವಚದಂತೆ ಈ ಶಿಬಿರವನ್ನು ಆರಂಭಿಸಲಾಗಿದೆ ಎಂದರು.

ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು ಇನ್ನೂ ನಿರ್ಧಾರವಾಗಿಲ್ಲ. ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸಲಾಗುವುದು. ಮುಂದಿನ 3 ತಿಂಗಳವರೆಗೆ ಅವರಿಗೆ ಬೇಕಾದ ಪೌಷ್ಟಿಕ ಆಹಾರ, ಔಷಧಗಳನ್ನು ಒದಗಿಸಿ ಅವರನ್ನು ಸದೃಢರನ್ನಾಗಿಸಿ ಕೋವಿಡ್​ನಿಂದ ರಕ್ಷಿಸುವ ಕೆಲಸ ಮಾಡಲಾಗುವುದು. ತಪಾಸಣೆಯ ಸಂದರ್ಭದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್, ಪ್ರೋಟಿನ್ ಸೇರಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೂರಕ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾಳಜಿಯಿಂದ ಮಕ್ಕಳ ಆರೋಗ್ಯ ತಪಾಸಣೆ ಆರಂಭಿಸಲಾಗಿದೆ. ಮಕ್ಕಳಿಗೆ ಸಣ್ಣ ಜ್ವರ, ನೆಗಡಿಯಾದರೂ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕು. ಮುಂದಿನ 3 ತಿಂಗಳವರೆಗೆ ಕಡ್ಡಾಯವಾಗಿ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆಯಿದ್ದರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಬೇರೆಯವರ ಮನೆಗೆ ಮಕ್ಕಳನ್ನು ಕಳುಹಿಸಬೇಡಿ. ಶಿಕ್ಷಕರೊಂದಿಗೆ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಚಿಕಿತ್ಸೆಗೆ ನೆರವು ಪಡೆಯಿರಿ ಎಂದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಟಿಎಚ್​ಒ ಡಾ. ಪ್ರಭಾಕರ ಕುಂದೂರ, ಬಿಇಒ ಎಂ.ಎಚ್. ಪಾಟೀಲ, ಶಿಗ್ಗಾಂವಿ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net