ಮೈಸೂರಿನ ಸೌಂದರೀಕರಣಕ್ಕೆ 2.70 ಕೋಟಿ

mysore-mysuru
Published on
  • ತ್ಯಾಜ್ಯದ ಕೊಂಪೆಯಾಗಿರುವ ಜಾಗಗಳ ಅಭಿವೃದ್ಧಿ
  • ಪ್ರತಿ ವಲಯ ಕಚೇರಿಗೆ 30 ಲಕ್ಷ ರೂ. ಮೀಸಲಿಟ್ಟ ಪಾಲಿಕೆ

ಸದೇಶ್ ಕಾರ್ಮಾಡ್ ಮೈಸೂರು
ದೇಶದ ಸ್ವಚ್ಛ, ಸುಂದರ ನಗರಗಳ ಸಾಲಿನಲ್ಲಿ ಮೈಸೂರು ಮುಂಚೂಣಿಯಲ್ಲಿ ನಿಲ್ಲುತ್ತದೆ. ನಗರವನ್ನು ಮತ್ತಷ್ಟು ಸ್ವಚ್ಛ, ಸುಂದರವಾ ಗಿಡಲು ಸಾಧ್ಯತೆಗಳು ಇದ್ದರೂ ಕೆಲವು ಜನರಿಂದ ಮಾತ್ರ ನಗರ ಪಾಲಿಕೆಗೆ ಸೂಕ್ತ ಸಹಕಾರ ದೊರೆಯುತ್ತಿಲ್ಲ. ನಗರದಲ್ಲಿ ಜನರು ಪ್ರತಿನಿತ್ಯ ತ್ಯಾಜ್ಯ ತಂದು ಸುರಿಯುವ ಜಾಗಗಳನ್ನು ಗುರುತಿಸಿರುವ ನಗರ ಪಾಲಿಕೆ ಆ ಜಾಗದ ಸೌಂದರೀಕರಣಕ್ಕೆ ಮುಂದಾಗಿದೆ. ಇದಕ್ಕೆ ಬರೋಬ್ಬರಿ 2.70 ಕೋಟಿ ರೂ. ಮೀಸಲಿರಿಸಲಾಗಿದೆ.

ಜನರು ತ್ಯಾಜ್ಯ ತಂದು ಸುರಿಯುವ ಜಾಗಗಳನ್ನು ಕಳೆದ ಬಾರಿ ಶುಚಿಗೊಳಿಸಿದ ನಗರ ಪಾಲಿಕೆ ಆ ಜಾಗಗಳಲ್ಲಿ ಚಿತ್ರಗಳನ್ನು ಬಿಡಿಸುವ ಕಾರ್ಯ ಮಾಡಿತ್ತು. ಚಿತ್ರ ಬಿಡಿಸಿ ಶುಚಿಗೊಳಿಸಿದ ಜಾಗದಲ್ಲಿ ಇದೀಗ ಜನರು ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಿದ್ದು ಅದರ ಪಕ್ಕದ ಜಾಗದಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ.
ಈ ರೀತಿ ಜನರು ಎಲ್ಲೆಲ್ಲಿ ತ್ಯಾಜ್ಯವನ್ನು ಸುರಿಯುತ್ತಿದ್ದಾರೋ ಅಲ್ಲೆಲ್ಲ ಚಿತ್ರಗಳನ್ನು ಬಿಡಿಸುವುದು, ಫುಟ್‌ಪಾತ್ ನಿರ್ಮಾಣ, ಸಸಿಗಳನ್ನು ನೆಡುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಆ ಜಾಗವನ್ನು ಜನಬಳಕೆಯ ತಾಣವಾಗಿ ಮಾಡುವ ಉದ್ದೇಶವನ್ನು ಪಾಲಿಕೆ ಹೊಂದಿದೆ. ಜನರು ತ್ಯಾಜ್ಯ ಸುರಿಯುವ ಜಾಗವನ್ನು ಫುಟ್‌ಪಾತ್ ಆಗಿ ಬಳಸಲು ಪ್ರಾರಂಭಿಸಿದರೆ ಜನರು ತ್ಯಾಜ್ಯ ಸುರಿಯುವುದನ್ನು ನಿಲ್ಲಿಸುತ್ತಾರೆ ಎಂಬುದು ಪಾಲಿಕೆಯ ಲೆಕ್ಕಾಚಾರವಾಗಿದೆ. ನಗರ ಪಾಲಿಕೆಯ ಈ ಯೋಜನೆಯನ್ನೂ ಸಹ ಜನರು ಬುಡಮೇಲು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ಸ್ವಚ್ಛತೆಗೆ ಸಹಕರಿಸಿ
ಮೈಸೂರು ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯುವಲ್ಲಿ ನಗರದ ನಾಗರಿಕರು ನೀಡಿದ ಸಹಕಾರ ಮರೆಯುವಂತಿಲ್ಲ. ಆದರೆ, ಕೆಲವು ವ್ಯಕ್ತಿಗಳಿಂದ ನಗರದ ವಿವಿಧ ಪ್ರದೇಶಗಳು ಗಬ್ಬೆದ್ದು ನಾರುವಂತಾಗಿದೆ. ಪ್ರತಿನಿತ್ಯ ಮನೆ ಮನೆ ತ್ಯಾಜ್ಯ ಸಂಗ್ರಹಿಸುವ ವಾರ್ಡ್‌ಗಳಲ್ಲೂ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಜನರು ಎಸೆಯುತ್ತಿರುವುದು ಬೇಸರದ ಸಂಗತಿ. ಈ ರೀತಿ ಎಸೆಯುವ ತ್ಯಾಜ್ಯವನ್ನು ಪ್ರತಿನಿತ್ಯ ಪೌರ ಕಾರ್ಮಿ ಕರು ಶುಚಿಗೊಳಿಸುವ ಕಾರ್ಯ ಮಾಡುತ್ತಿರುತ್ತಾರೆ. ಮರುದಿನ ಅದೇ ಜಾಗದಲ್ಲಿ ಮತ್ತೆ ತ್ಯಾಜ್ಯದ ರಾಶಿ ಬಿದ್ದಿರುತ್ತದೆ. ನಗರ ಪಾಲಿಕೆ ಸಾಕಷ್ಟು ಜನರು ದಂಡ ವಿಧಿಸಿದರೂ ಕೆಲವರ ಮನಸ್ಥಿತಿ ಮಾತ್ರ ಇನ್ನೂ ಬದಲಾಗುಂತೆ ಕಾಣುತ್ತಿಲ್ಲ. ಮೈಸೂರು ದೇಶದ ನಂ.1 ಸ್ವಚ್ಛ ನಗರಿಯಾಗಿ ರೂಪುಗೊಳ್ಳಲು ನಗರದ ಎಲ್ಲ ಜನರ ಸಹಕಾರ ಅಗತ್ಯ. ಇಲ್ಲವಾದಲ್ಲಿ ಪಾಲಿಕೆ ಎಷ್ಟೇ ಪರಿಶ್ರಮ ವಹಿಸಿದರೂ ಅದು ನೀರಿನಲ್ಲಿ ಮಾಡಿದ ಹೋಮದಂತಾಗುತ್ತದೆ.

ಧೂಳು ಮುಕ್ತಗೊಳಿಸಲು ಪ್ರಯತ್ನ
ನಗರದಲ್ಲಿ ವಾಹನ ಸಂಚಾರ ಸಂದರ್ಭ ಧೂಳು ಮೇಲೆದ್ದು ಜನರು ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಾರೆ. ಈ ಸಮಸ್ಯೆ ಪರಿಹಾರಕ್ಕೆ ನಗರ ಪಾಲಿಕೆಯು ಕಸ ಗುಡಿಸುವ ಯಂತ್ರವನ್ನು (ಟ್ರಕ್ ಮೌಂಟೆಡ್ ಸ್ವೀಪಿಂಗ್ ಮಷಿನ್) ಪಾಲಿಕೆ ಖರೀದಿಸಿದ್ದು, ರಾತ್ರಿ ಪಾಳಿಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಶುಚಿಗೊಳಿಸುವ ಕಾರ್ಯ ಮಾಡುತ್ತಿದೆ. ಒಟ್ಟಾರೆ ನಗರವನ್ನು ಸುಂದರವಾಗಿಡಲು ನಗರ ಪಾಲಿಕೆ ಶ್ರಮಿಸುತ್ತಿದ್ದು, ಜನರು ಪಾಲಿಕೆಯೊಂದಿಗೆ ಕೈಜೋಡಿಸುವ ಕಾರ್ಯ ಮಾಡಬೇಕು.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ
2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶ ದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆಯಿತು. 2021ರಲ್ಲಿ ನಗರ ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ, ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿಯಲ್ಲಿ 5ನೇ ರ‌್ಯಾಂಕ್ ಪಡೆದುಕೊಂಡಿತು. ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿತು. 2016ರಲ್ಲಿ ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆದುಕೊಂಡಿತು. 2019, 2020, 2021ರಲ್ಲಿರಲ್ಲಿ ಫೈವ್‌ಸ್ಟಾರ್ ರೇಟಿಂಗ್‌ನೊಂದಿಗೆ ಸತತ ಮೂರು ಬಾರಿ ತ್ಯಾಜ್ಯ ಮುಕ್ತ ನಗರಿ ಪ್ರಶಸ್ತಿ ನಗರ ಮುಡಿಗೇರಿಸಿಕೊಂಡಿತು.

ನಗರವನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಾರೆ. ನಗರದ ಪ್ರತಿಯೊಂದು ಮನೆಗಳಿಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಹೀಗಿದ್ದರೂ ಕೆಲವು ನಾಗರಿಕರು ರಸ್ತೆ ಬದಿ ತ್ಯಾಜ್ಯವನ್ನು ತಂದು ಸುರಿಯುವುದನ್ನು ನಿಲ್ಲಿಸುತ್ತಿಲ್ಲ. ಇಂತಹ ಜಾಗಗಳನ್ನು ಗುರುತಿಸಿ ಅವುಗಳ ಸೌಂದರೀಕರಣ ಮಾಡಿ ತ್ಯಾಜ್ಯ ಸುರಿಯುವುದನ್ನು ತಪ್ಪಿಸಲು ಪ್ರಯತ್ನ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕೆ ಪ್ರತಿ ವಲಯ ಕಚೇರಿಗೆ 30 ಲಕ್ಷ ರೂ. ಮೀಸಲಿಡಲಾಗಿದೆ.

ಲಕ್ಷ್ಮೀಕಾಂತ್ ರೆಡ್ಡಿ, ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net