

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ
ದಾವಣಗೆರೆ ಜಿಲ್ಲೆಯಲ್ಲಿ ಗುಲಾಬಿ ಸುಂದರಿ ಡ್ರ್ಯಾಗನ್ ಫ್ರೂಟ್ ಕಲರವ ಸದ್ದು ಮಾಡುತ್ತಿದೆ. ಆದರೆ ದರ ಕುಸಿತದಿಂದ ರೈತರು ಮಾಡಿದ ವೆಚ್ಚ ಗಳಿಸುವುದು ಕೂಡ ಕಷ್ಟವಾಗಿದೆ.
ಒಂದು ಎಕರೆಯಲ್ಲಿ ಡ್ರಾಗನ್ ಬೆಳೆಯಲು ಪ್ರಾರಂಭಿಸಿದಾಗ ಮೊದಲ ವರ್ಷ ಕಲ್ಲು ಕಂಬಗಳು, ಡ್ರಾಗನ್ ಫ್ರೂಟ್ಸ್ ಕಟಿಂಗ್, ನೀರಾವರಿ ವ್ಯವಸ್ಥೆ, ಡ್ರಿಪ್, ಕೂಲಿ ಕಾರ್ವಿುಕರ ಖರ್ಚು ಸೇರಿ ಒಟ್ಟು 6 ಲಕ್ಷ ರೂ. ತಗಲುತ್ತದೆ. ನಂತರದ ದಿನಗಳಲ್ಲಿ 2 ಲಕ್ಷ ರೂ. ವೆಚ್ಚ ಬರುತ್ತದೆ.
ಮಾರುಕಟ್ಟೆಯಲ್ಲಿ ಡ್ರ್ಯಾಗನ್ ದರ ಕುಸಿದಿದೆ. ಪ್ರಸ್ತುತ ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 50 ರಿಂದ 60 ರೂ., ಚೆನೈ ಮಾರುಕಟ್ಟೆಯಲ್ಲಿ 80 ರಿಂದ 100 ರೂ., ಬೆಂಗಳೂರು ಮಾರುಕಟ್ಟೆಯಲ್ಲಿ 100 ರೂ. ಬೆಲೆ ಇದೆ.
ಮುಂಬೈ ಮಾರುಕಟ್ಟೆಯಲ್ಲಿ ಕೆಜಿಗೆ 130 ರಿಂದ 150 ರೂ. ಬೆಲೆ ಇರುವುದರಿಂದ ಪ್ರತಿ ಬಾಕ್ಸ್ನಲ್ಲಿ 10 ಕೆಜಿ ಹಣ್ಣನ್ನು ತುಂಬಿ ಬೆಂಗಳೂರಿನಿಂದ ಮುಂಬೈಗೆ ಹೋಗುವ ಖಾಸಗಿ ಬಸ್ ಅಥವಾ ಲಾರಿಗಳ ಮೂಲಕ ಮಾರುಕಟ್ಟೆಗೆ ರವಾನಿಸುತ್ತೇವೆ ಎಂದು ರೈತ ನವೀನ್ ಮರಡಿ ತಿಳಿಸಿದ್ದಾರೆ.
ಕೆಲವೊಮ್ಮೆ ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 50, 60, 70 ರೂ. ಗಳಿಗೆ ಮಾರಾಟ ಮಾಡಿದ್ದೇವೆ. ದೂರದ ಮಾರುಕಟ್ಟೆಗಳಿಗೆ ಕಳಿಸುವುದಕ್ಕಿಂತ ಇಲ್ಲೇ ಮಾರಾಟ ಮಾಡುವುದೇ ಉತ್ತಮ. ಹಣ್ಣು, ತರಕಾರಿ ಬೆಳೆಗಳಿಗೆ ಬೆಂಬಲ ದರ ನಿಗದಿ ಮಾಡಿದರೆ ಕೃಷಿಕರಿಗೆ ಅನುಕೂಲವಾಗುತ್ತದೆ ಎಂದು ರೈತ ಹನುಮಂತಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಾಯಕೊಂಡ ಗ್ರಾಮದ ರೈತ ಹನುಮಂತಪ್ಪ ಮರಡಿ, ಮಗ ನವೀನ್ ಮರಡಿ, ಬರಪೂರ ಡ್ರಾಗನ್ ಫೂ›ಟ್ಸ್ ಬೆಳೆದಿದ್ದು, ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 14 ವರ್ಷಗಳಿಂದ ರೈತರು ಈ ಹಣ್ಣನ್ನು ಬೆಳೆಯುತ್ತಿದ್ದಾರೆ. ಖರ್ಚು ವೆಚ್ಚ ತೆಗೆದು ಅತ್ಯಧಿಕ ಲಾಭ ಕಂಡುಕೊಂಡಿದ್ದಾರೆ ಮತ್ತು ಕೃಷಿ ಲಾಭದಾಯಕ ಎಂದು ತೋರಿಸಿಕೊಟ್ಟ ಉದಾಹರಣೆಗಳಿವೆ.
ಮಾಯಕೊಂಡ ಹೊರವಲಯದ ಬುಳ್ಳಾಪುರ ರಸ್ತೆಯಲ್ಲಿರುವ ತಮ್ಮ 2 ಎಕರೆ ಜಮೀನಿನ ಪೈಕಿ 1 ಎಕರೆಯಲ್ಲಿ ಡ್ರ್ಯಾಗನ್ ಬೆಳೆದಿದ್ದಾರೆ. ಪ್ರತಿವರ್ಷ 6 ರಿಂದ 7 ಟನ್ ಹಣ್ಣು ಸಿಗುತ್ತದೆ. ಸಾಕಷ್ಟು ನೀರು, ರಸಗೊಬ್ಬರ, ಕೀಟನಾಶಕಗಳನ್ನು ಬಳಕೆ ಮಾಡುವುದರಿಂದ ಉತ್ತಮ ಇಳುವರಿ ಬರುತ್ತದೆ. ಒಂದು ವರ್ಷಕ್ಕೆ ಒಂದೇ ಬೆಳೆ. ಪ್ರತಿವರ್ಷ ಮಾರ್ಚ್ ಕೊನೇ ವಾರದಲ್ಲಿ ಹೂವು ಬಿಟ್ಟು ಏಪ್ರಿಲ್ ಕೊನೆಯ ವಾರದಲ್ಲಿ ಹಣ್ಣುಗಳು ಕಟಾವಿಗೆ ಬರುತ್ತವೆ ಎನ್ನುತ್ತಾರೆ ರೈತರು.
ಜಿಲ್ಲೆಯಲ್ಲಿ ಡ್ರಾಗನ್ ಫೂ›ಟ್ ಬೆಳೆಯುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಸ್ತುತ 45 ಹೆಕ್ಟರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ಒಮ್ಮೆ ಬೆಳೆಯಲು ಪ್ರಾರಂಭಿಸಿದರೆ ಸುಮಾರು 25 ರಿಂದ 30 ವರ್ಷ ಹಣ್ಣುಗಳನ್ನು ಪಡೆಯಬಹುದು. ನರೇಗಾ ಹಾಗೂ ತೋಟಗಾರಿಕಾ ಇಲಾಖೆ ಮೂಲಕ ಡ್ರ್ಯಾಗನ್ ಹಣ್ಣು ಬೆಳೆಯುವ ಕೃಷಿಕರಿಗೆ ಸಹಾಯಧನದ ಸೌಲಭ್ಯಗಳಿವೆ. | ರಾಘವೇಂದ್ರ ಪ್ರಸಾದ್, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ ದಾವಣಗೆರೆ. ಮಾಯಕೊಂಡ ಹೋಬಳಿಯ ರೈತರು ಮೆಕ್ಕೆಜೋಳ ಬಿಟ್ಟರೆ ಅಡಕೆ ಬೆಳೆಗೆ ಅಂಟಿಕೊಂಡಿದ್ದಾರೆ. ಏಕಬೆಳೆ ಪದ್ಧತಿ ಕೈ ಬಿಟ್ಟು ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆದರೆ ಆರ್ಥಿಕವಾಗಿ ಸದೃಢರಾಗಬಹುದು. | ನವೀನ್ ಮರಡಿ, ಪ್ರಗತಿಪರ ಯುವ ರೈತ, ಮಾಯಕೊಂಡ.