2.50 ಲಕ್ಷ ಹೆಕ್ಟೇರ್ ಬೆಳೆ ಹಾನಿ!

MANJU
ರಾಮದುರ್ಗದಲ್ಲಿ ಬೆಳೆ ಹಾನಿಯಾಗಿರುವುದನ್ನು ಅಧಿಕಾರಿಗಳು ಪರಿಶೀಲಿಸುತ್ತಿರುವುದು.
Published on

ಬೆಳಗಾವಿ: ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ತೀವ್ರ ಬರ ಉಂಟಾಗಿ ಅಂದಾಜು 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ, ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಗಳಿಗೆ ಹಾನಿ ಉಂಟಾಗಿದ್ದು, ಸುಮಾರು 2 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ.

ರಾಜ್ಯದಲ್ಲಿ ತೀವ್ರ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಳಗಾವಿ, ಖಾನಾಪುರ ಹೊರತುಪಡಿಸಿ 13 ತಾಲುಕುಗಳನ್ನು ಬರಪೀಡಿತ ತಾಲೂಕುಗಳೆಂದು ೋಷಿಸಿದೆ. ಮುಂಗಾರಿನಲ್ಲಿ ಬಿತ್ತನೆಯಾಗಿದ್ದ 6.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸರಿಸುಮಾರು 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಹೆಸರು, ಶೇಂಗಾ, ಮೆಕ್ಕೆಜೋಳ, ಭತ್ತ, ಅಲಸಂದಿ, ಸೋಯಾಅವರೆ ಸೇರಿ ವಿವಿಧ ಬೆಳೆಗಳು ಹಾನಿ ಉಂಟಾಗಿರುವ ಕುರಿತು ಜಂಟಿ ಸಮೀಕ್ಷೆ ನಡೆಸಿದ ಅಂದಾಜು ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ.

ಈ ಬಾರಿ ಮುಂಗಾರು ಹಂಗಾಮಿನ ಆರಂಭದಲ್ಲಿ 190 ಮಿ.ಮೀ ವಾಡಿಕೆಗಿಂತ 305 ಮಿ.ಮೀ ಮಳೆಯಾಯಿತು. (ಶೇ.61 ಅಧಿಕ) ಈ ಹಂತದಲ್ಲಿ ಬಿತ್ತನೆ ಚುರುಕುಗೊಂಡಿತ್ತು. ಬಳಿಕ ಆಗಸ್ಟ್ ನಲ್ಲಿ 53 ಮಿ.ಮೀ. ಆಗಿದ್ದು, ಶೇ.62 ಮಳೆ ಕೊರತೆ ಉಂಟಾಯಿತು. ಪರಿಣಾಮ ಮೊಳಕೆ ಒಡೆಯುವ ಹಂತದಲ್ಲಿಯೇ ಬೆಳೆಗಳು ಸೊರಗುವಂತಾಯಿತು. ಗೋಕಾಕ, ಮೂಡಲಗಿ, ಅಥಣಿ, ರಾಯಬಾಗ, ಕಾಗವಾಡ, ರಾಮದುರ್ಗ, ಸವದತ್ತಿ, ಬೈಲಹೊಂಗಲ ಸೇರಿ ವಿವಿಧ ತಾಲೂಕುಗಳಲ್ಲಿ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದವು. ಕೆಲ ಭಾಗಗಳಲ್ಲಿ ಅಲ್ಪಸ್ವಲ್ಪ ಬೆಳೆ ಕೈ ಸೇರಿದೆ. ಒಂದು ಎಕರೆಗೆ 5 ರಿಂದ 6 ಕ್ವಿಂಟಾಲ್ ಇಳುವರಿ ಬರುವ ಪ್ರದೇಶದಲ್ಲಿ ಕೇವಲ 50 ಕೆಜಿವರೆಗೆ ಇಳುವರಿ ಬಂದಿದೆ. ಪರಿಣಾಮ ಬಿತ್ತನೆಗಾಗಿ ಮಾಡಿದ ಸಾಲ ಮರು ಪಾವತಿಸುವಷ್ಟ ಆದಾಯ ಬಾರದೆ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಬ್ಬು ಬೆಳೆಗೆ ಹೆಚ್ಚಿನ ಪೆಟ್ಟು

ಜಿಲ್ಲೆಯಲ್ಲಿ ಬರೋಬ್ಬರಿ 2.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದ್ದು, ಅದರಲ್ಲಿ 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು ಸಂಪೂರ್ಣ ಒಣಗಿದೆ. ಇದರಿಂದ ಪ್ರತಿ ಎಕರೆಗೆ ಸರಾಸರಿ ಇಳುವರಿ 20 ಟನ್‌ಗೆ ಇಳಿಕೆಯಾಗಿದೆ. ಉತ್ತಮವಾಗಿ ಮಳೆ ಸುರಿದಿದ್ದರೆ ಪ್ರತಿ ಎಕರೆಗೆ ಹೊಸ ಕಬ್ಬು ಸರಾಸರಿ 58ರಿಂದ 80 ಟನ್‌ವರೆಗೆ, ಕುಳೆ ಕಬ್ಬು 45ರಿಂದ 60 ಟನ್ ವರೆಗೆ ಇಳುವರಿ ಬರುತಿತ್ತು. ಮಳೆ ಅಭಾವ, ಕೊಳವೆ ಬಾವಿಗಳು ಬಂದ್, ನದಿಗಳಲ್ಲಿ ನೀರು ಇಲ್ಲದಿರುವ ಕಾರಣ ಇಳುವರಿ ಸರಾಸರಿ ಶೇ.38 ಕಡಿಮೆಯಾಗಿದೆ. ಇದರಿಂದಾಗಿ ಈ ವರ್ಷ ಸಕ್ಕರೆ ಇಳುವರಿ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.30 ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ

ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದಿರುವ ಕಾರಣ ಜಿಲ್ಲೆಯಲ್ಲಿನ ಮಳೆಯಾಶ್ರಿತ ಪ್ರದೇಶದಲ್ಲಿ ಶೇ.30 ಬಿತ್ತನೆಯಾಗಿಲ್ಲ. ಕೆಲವೆಡೆ ಬಿತ್ತನೆಯಾಗಿದ್ದರೂ ತೇವಾಂಶ ಇಲ್ಲದೆ ಮೊಳಕೆ ಹಂತದಲ್ಲಿಯೇ ಬೆಳೆಗಳು ಒಣಗಿವೆ. ಶೇಂಗಾ, ಹೆಸರು ಬೆಳೆಗಳ ಉತ್ಪಾದನೆ ಶೇ.90 ಕುಸಿದಿದೆ. ಹಾಗಾಗಿ ಈ ಬಾರಿ ಹೆಸರು, ಶೇಂಗಾ ಸೇರಿ ವಿವಿಧ ಬೆಳೆಗಳ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಬರ ಘೋಷಣೆಯಾಗಿರುವ 13 ತಾಲೂಕುಗಳಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇಳುವರಿ ಕಡಿಮೆ ಆಗಿರುವ ಕುರಿತು ಅಂದಾಜು ವರದಿ ಸಲ್ಲಿಸಲಾಗಿದೆ. ಬೆಳಗಾವಿ, ಖಾನಾಪುರ ತಾಲೂಕುಗಳಲ್ಲಿ ವಿಶೇಷ ಸಮೀಕ್ಷೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.| ನಿತೇಶ ಪಾಟೀಲ ಜಿಲ್ಲಾಧಿಕಾರಿ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net