ಆನ್‌ಲೈನ್ ಮೂಲಕ 2.40 ಲಕ್ಷ ರೂ.ವಂಚನೆ

cyber crime (1)
Published on

ರೋಣ: ತಾಲೂಕಿನಾದ್ಯಂತ ಆನ್‌ಲೈನ್ ವಂಚಕರ ಹಾವಳಿ ಹೆಚ್ಚಾಗಿದ್ದು ಬಡವರು, ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ತಾಲೂಕಿನ ಬೆಳವಣಿಕಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶರಣಪ್ಪ ಶಿವಸಿಂಪಿ ಎಂಬ ರೈತ ಕಳೆದ ಆಗಸ್ಟ್ 27ರಂದು 2 ಲಕ್ಷ 50 ಸಾವಿರ ರೂ. ಬೆಳೆ ಸಾಲ ಪಡೆದಿದ್ದರು. ಸಾಲ ರೈತನ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದಂತೆಯೇ ಅದೇ ದಿನ ಸಂಜೆ 6 ಗಂಟೆಗೆ ಆನ್‌ಲೈನ್ ಮೂಲಕ ವಂಚಕರು ರೈತನ ಬ್ಯಾಂಕ್ ಖಾತೆಗೆ ಕನ್ನ ಹಾಕಿ 2 ಲಕ್ಷ 40 ಸಾವಿರ ರೂ. ಲಪಟಾಯಿಸಿದ್ದಾರೆ.

ಈ ಕುರಿತು ರೈತ ಶರಣಪ್ಪ ಶಿವಸಿಂಪಿ ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಪ್ರಕಾಶ ಬಣಕಾರ ತನಿಖೆ ಕೈಗೊಂಡಿದ್ದಾರೆ.
ಜನರಲ್ಲಿ ಆತಂಕ: ಇತ್ತೀಚೆಗೆ ರೋಣ ಪಟ್ಟಣದ ನಿವೃತ್ತ ನೌಕರರೊಬ್ಬರ 4 ಲಕ್ಷ ರೂ. ಮತ್ತು ತಾಲೂಕಿನ ನೈನಾಪುರ ಗ್ರಾಮದ ಗುತ್ತಿಗೆ ನೌಕರನ 3.5 ಲಕ್ಷ ರೂ. ವಂಚನೆಯಾದ ಬಗ್ಗೆ ರೋಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಘಟನೆಗಳು ತಾಲೂಕಿನ ಜನರಲ್ಲಿ ಆತಂಕ ಉಂಟು ಮಾಡಿವೆ.

ಕಷ್ಟಪಟ್ಟು ದುಡಿದ ದುಡ್ಡು ವಂಚಕರ ಪಾಲಾಗುತ್ತಿದ್ದರೂ ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ ಎನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net