

ಕಾರವಾರ: ಎರಡ್ಮೂರು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಘೊಷಣೆ ಆಗಲಿದ್ದು, ಈಗಾಗಲೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಾಜಕೀಯದ ಗಾಳಿ ಸುಳಿಯಲಾರಂಭಿಸಿದೆ.2015ರ ಮೇ 29ರಂದು ಜಿಲ್ಲೆಯ 230 ಗ್ರಾಪಂಗಳ 2700ಕ್ಕೂ ಅಧಿಕ ಸ್ಥಾನಗಳಿಗೆ ಚುನಾವಣೆ ನಡೆದು, ಜೂನ್ 5ರಂದು ಫಲಿತಾಂಶ ಪ್ರಕಟಗೊಂಡಿತ್ತು. 7316 ಜನ ಚುನಾ ವಣೆ ಎದುರಿಸಿದ್ದರು. 267 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದರೆ, 13 ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿರಲಿಲ್ಲ. ಆಗ ಜೂನ್ ಅಂತ್ಯ ಅಂಥವಾ ಜುಲೈ ಮೊದಲ ವಾರದಲ್ಲಿ ಎಲ್ಲ ಗ್ರಾಪಂಗಳ ಮೊದಲ ಸಭೆ ನಡೆದಿತ್ತು. ಈ ವರ್ಷ ಇದೇ ಅವಧಿಗೆ ಗ್ರಾಪಂ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ. ಹಾಗಾಗಿ, ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆಗಾಗಿ ಚುನಾವಣಾ ಆಯೋಗ ಈಗಾಗಲೇ ತಯಾರಿ ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳ ಮೊದಲ ಹಂತದ ಸಭೆ ನಡೆದಿದೆ. ಜಿಲ್ಲೆಯಲ್ಲಿ ಗ್ರಾಪಂಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಲ್ಲ. ಮತದಾರರ ಪಟ್ಟಿ ಪ್ರಕಟಿಸಬೇಕಿದೆ. ತಾಲೂಕು ಹಂತದಲ್ಲಿ ಗ್ರಾಪಂಗಳ ಪ್ರತಿ ಕ್ಷೇತ್ರದ ಮೀಸಲಾತಿ ನಿಗದಿ ಮಾಡಬೇಕಿದೆ. ಈ ಎಲ್ಲ ವಿಷಯಗಳ ಬಗ್ಗೆ ರ್ಚಚಿಸಲಾಗಿದೆ. ಜಿಲ್ಲೆಯಲ್ಲಿ ಹಿಂದಿನಂತೆ ಮತ ಪೆಟ್ಟಿಗೆಯ ಮೂಲಕವೇ ಮತದಾನ ನಡೆಸುವ ಸಾಧ್ಯತೆ ಇದೆ.
ರಾಜಕೀಯದ ಸುಳಿ ಗಾಳಿ: ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನೇರವಾದ ಸಹಭಾಗಿತ್ವ ಇಲ್ಲ. ಯಾವುದೇ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ. ಆದರೆ, ಅತಿ ಹೆಚ್ಚು ರಾಜಕೀಯ ಇಲ್ಲೇ ಕಾಣಿಸುತ್ತಿದೆ. ಒಂದೇ ಮನೆಯ ಸದಸ್ಯರಲ್ಲಿ ಮೂವರನ್ನು ಬೆಂಬಲಿಸುವವರಿದ್ದಾರೆ. ಈಗಾಗಲೇ ಗ್ರಾಮೀಣ ಭಾಗದ ಕಟ್ಟೆಗಳು, ಅಂಗಡಿ ಮುಂಗಟ್ಟುಗಳು, ಚಹಾ ಹೋಟೆಲ್ಗಳಲ್ಲಿ ರಾಜಕೀಯದ ಚರ್ಚೆ ಪ್ರಾರಂಭವಾಗಿಬಿಟ್ಟಿದೆ. ಕಳೆದ ಐದು ವರ್ಷದಲ್ಲಿ ಯಾರು ಏನು ಮಾಡಿದರು? ಯಾರನ್ನು ಗೆಲ್ಲಿಸಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಪರಾಮರ್ಶೆ ನಡೆದಿದೆ.
ಆರಂಭವಾಯ್ತು ವಿಶೇಷ ಕಾಳಜಿ: ಒಂದೆರಡು ತಿಂಗಳಲ್ಲಿ ಚುನಾವಣೆ ಬರುವುದರಿಂದ ಮರಿ ಪುಢಾರಿಗಳು ತಯಾರಿ ನಡೆಸಿದ್ದಾರೆ. ಕಳೆದ ಐದು ವರ್ಷ ತಿರುಗಿಯೂ ನೋಡದವರು ಕೂಡ ಈಗ ಮನೆಗಳಿಗೆ ಬಂದು ಸಮಸ್ಯೆ ಆಲಿಸುತ್ತಿದ್ದಾರೆ. ರಸ್ತೆ, ಚರಂಡಿ, ಉದ್ಯೋಗ ಖಾತ್ರಿಯಲ್ಲಿ ವೈಯಕ್ತಿಕ ಕೆಲಸ... ಹೀಗೆ ವಿವಿಧ ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಮನೆ ಕರದ ಸಮಸ್ಯೆ ಎತ್ತಿ ಜನರ ಜತೆ ಪ್ರತಿಭಟನೆಗಿಳಿದಿದ್ದಾರೆ.
ಗ್ರಾಪಂ ಚುನಾವಣೆಯ ವಿಶೇಷ
ರಾಜಕೀಯ ಪಕ್ಷಗಳ ಚಿಹ್ನೆಯಡಿ ಇಲ್ಲಿಲ್ಲ ಚುನಾವಣೆ
ಇಲ್ಲಿ ಬ್ಯಾಲೆಟ್ ಪೇಪರ್ನ (ಮತಪತ್ರ) ಮೂಲಕವೇ ಚುನಾವಣೆ
ಜಿಪಂ, ತಾಪಂಗಳಿಗಿಂತ ಗ್ರಾಪಂಗೆ ನೇರವಾಗಿ ಅನುದಾನ ಬರುವುದರಿಂದ ಗ್ರಾಪಂ ಸದಸ್ಯರಾಗಲು ಹೆಚ್ಚಿನವರ ಆಸಕ್ತಿ
ಗಲ್ಲಿ ಗಲ್ಲಿಗೂ ಪುಢಾರಿಗಳು, ಮನೆ ಮನೆಗಳಲ್ಲೂ ರಾಜಕೀಯ ಚರ್ಚೆ