2.10 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ: ಶಾಸಕ ಎ.ಟಿ,ರಾಮಸ್ವಾಮಿ

2.10 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ:  ಶಾಸಕ ಎ.ಟಿ,ರಾಮಸ್ವಾಮಿ
Published on


ಹೊಳೆನರಸೀಪುರ :
ಬಿದಿರಕ್ಕ ಗ್ರಾಮದಲ್ಲಿನ ಆರುನೂರಕ್ಕು ಹೆಚ್ಚು ಮನೆಗಳು ಇದ್ದು ಗ್ರಾಮದಲ್ಲಿನ ನಿವಾಸಿಗಳು ಬಹುದಿನಗಳಿಂದ ಶುದ್ದ ಕುಡಿಯುವ ನೀರು ದೊರಕದಂತಾಗಿತ್ತು , ಅದನ್ನು ಗಮನಿಸಿ ಗ್ರಾಮದಲ್ಲಿನ ಎಲ್ಲ ಮನೆಗಳಿಗೂ ಕಾವೇರಿ ನದಿಯಿಂದ ನೀರೆತ್ತು ಅದನ್ನು ಶುದ್ದ ಗೊಳಿಸಿ ಪ್ರತಿ ಮನೆಗಳಿಗೂ ನೀರು ಕೊಡಲಾಗುತ್ತಿದೆ ಎಂದು ಅರಕಲಗೂಡು ಶಾಸಕ ಎ.ಟಿ,ರಾಮಸ್ವಾಮಿ ನುಡಿದರು.


ತಾಲೂಕಿನ ಬಿದಿರಕ್ಕ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 2.10 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ನಲ್ಲಿನ ಸಂಪರ್ಕಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಎಲ್ಲ ಮನೆಗಳಿಗೆ ನಲ್ಲಿ ಅಳವಡಿಸಲು ಓವರ್‌ಹೆಡ್ ಟ್ಯಾಂಕಿನಿಂದ ಸುಮಾರು 15 ಸಾವಿರ ಮೀಟರ್ ನಷ್ಟು ಪೈಪು ಆಳವಡಿಸಿ ನಿಮ್ಮಗಳ ಮನೆಗೆ ಶುದ್ದ ನೀರು ಕುಡಿಯುವ ನೀರಿನ ಸಂಪರ್ಕ ನೀಡಲಾಗುತ್ತಿದೆ ಎಂದರು.


ಇಲ್ಲಿಯವರೆಗೆ ಬಿದಿರಕ್ಕ ಮತ್ತು ಶಿಡ್ಲಹಳ್ಳಿ ಗ್ರಾಮಗಳಲ್ಲಿ ವಾಸಿಸುವ ಜನರು ಬೋರ್ ವೆಲ್ , ಕೆರೆ , ನಾಲೆ ನೀರನ್ನು ಉಪಯೋಗಿಸಲಾಗುತ್ತಿತ್ತು, ಇದರಿಂದ ಗ್ರಾಮದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದನ್ನು ಗಮನಿಸಿದ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಗ್ರಾಮಗಳಿಗೂ ಶುದ್ದ ಕುಡಿಯುವ ನೀರು ನೀಡುವುದು ನಮ್ಮ ರಾಜ್ಯ ಸರ್ಕಾರದ ಯೋಜನೆ ಆಗಿದ್ದು ಅದನ್ನು ಇದೀಗ ನಮ್ಮ ಕ್ಷೇತ್ರದಲ್ಲಿನ ಗ್ರಾಮಗಳಿಗೂ ವಿಸ್ತರಿಸಲಾಗಿದೆ.


ಇಂದು ಬಿದರಕ್ಕ ಗ್ರಾಮದ ಎಲ್ಲ ಮನೆಗಳಿಗೂ ಸಹ ಶುದ್ದ ಕುಡಿಯುವ ನೀರು ಸಂಪರ್ಕ ನೀಡಿ ಇದರಿಂದ ಆಗುವ ಉಪಯೋಗ ಮತ್ತು ನೀರನ್ನು ನಿಗಧಿತವಾಗಿ ಉಪಯೋಗಿಸುವ ಬಗ್ಗೆ ತಮ್ಮಗಳಿಗೆ ತಿಳಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದ ಅವರು ಇದೇ ರೀತಿ ಶಿಡ್ಲಹಳ್ಳಿ ಗ್ರಾಮದಲ್ಲಿಯೂ ಸಹ ಕುಡಿಯವ ನೀರು ಸಂಪರ್ಕ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದ ಅವರು ಅದಕ್ಕಾಗಿ 25 ಸಾವಿರ ಲೀಟರ್‌ನ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ನೀರು ಪೂರೈಸಲಾಗುವುದೆಂದರು.


ಇಂದು ತಾವು ಒಟ್ಟು ಐದು ಗ್ರಾಮಗಳಾದ ಶಿಡ್ಲಹಳ್ಳಿ, ಬಿದಿರಕ್ಕ, ಬಿದರಕ್ಕ ಕೊಪ್ಪಲು , ಕೋಗಿಲಹಳ್ಳಿ ಹಾಗು ಸೋಮನಹಳ್ಳಿ ಕೊಪ್ಪಲು ಗಳಲ್ಲಿ 930 ಮನೆಗಳಿಗೆ ಶುದ್ದ ಕುಡಿಯುವ ನೀರಿನ ಸಂಪರ್ಕದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಇದಕ್ಕೆ ಒಟ್ಟು 3.73 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು. ಇದರೊಂದಿಗೆ ರಸ್ತೆ ದುರಸ್ಥಿಗೆ 1.5 ಲಕ್ಷ, ಕಾಂಕ್ರೀಟ್ ರಸ್ತೆ ಕಾಮಗಾರಿಗೆ 10 ಲಕ್ಷ , ಗ್ರಾಮದಲ್ಲಿ ಗ್ರಂಥಾಲಯಕ್ಕೆ 2 ಲಕ್ಷ, ಚರಂಡಿ ಕಾಮಗಾರಿಎ ಎರಡು ಲಕ್ಷ ಹಾಗು ಗ್ರಾಮದಲ್ಲಿನ ಅಂಬೇಡ್ಕರ್ ಭವನದ ಊಟದ ಹಾಲ್ ಕಾಮಗಾರಿಗೆ 5 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.


ನಿಮ್ಮ ಗ್ರಾಮಗಳಿಗೆ ಕುಡಿಯುವ ನೀರು ಸಂಪರ್ಕದ ಯೋಜನೆಗೆ ಇಂದು ಚಾಲನೆ ನೀಡಲಾಗಿದ್ದು ಕಾಮಗಾರಿ ವೇಳೆ ಗ್ರಾಮದ ನಿವಾಸಿಗಳು ವಾಸಿಸುವ ರಸ್ತೆ ಇಕ್ಕೆಲಗಳಲ್ಲಿ ನೀರಿನ ಪೈಪನ್ನು ಮೂರು ಅಡಿ ಆಳದಲ್ಲಿ ಆಳವಡಿಸುವಲ್ಲಿ ಗ್ರಾಮದ ಜನರು ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.


ಗ್ರಾಮದಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆಯುವಾಗಿ ಅಕಸ್ಮಾತ್ ರಸ್ತೆಯನ್ನು ಆಗೆಯಬೇಕಾಗಿ ಬಂದಲ್ಲಿ ಜೆಸಿಬಿಯಿಂದ ಅಗೆಯುವುದನ್ನು ಕೈಬಿಟ್ಟು ಹೊಸ ತಂತ್ರಜ್ಞಾನದಲ್ಲಿ ಬಂದಿರುವ ಕಟರ್‌ಗಳನ್ನು ಬಳಸಿ ಕಾಮಗಾರಿ ನಡೆವುದುರಿಂದ ಕಾಂಕ್ರೀಟ್ ರಸ್ತೆಗಳು ಹಾಳಾಗದು ಎಂದು ಕಿವಿ ಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ನೀರು ವಿತರಣಾ ಇಲಾಖೆಯ ಅಧಿಕಾರಿ ಪ್ರಶಾಂತ್, ತಾಲೂಕು ಪಂಚಾಯಿತಿ ಅಧಿಕಾರಿ ಗೋಪಾಲ್ ಹಾಗು ಗ್ರಾಮದ ಮುಖಂಡರುಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net