1ನೇ ತರಗತಿಗೆ ಮಕ್ಕಳ ದಾಖಲಾತಿ: ‘ವಯೋಮಿತಿ’ ತಳಮಳ, ಗೊಂದಲ...!

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಪ್ರಾಥಮಿಕ ಶಾಲೆಯ 1ನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿ ಕುರಿತು ಮತ್ತೆ ಗೊಂದಲ ಸೃಷ್ಟಿಯಾಗಿದೆ. ಹೊಸ ನಿಯಮದ ಬಗ್ಗೆ ಪಾಲಕರಲ್ಲಿ ತಳಮಳ ಶುರುವಾಗಿದ್ದರೆ, ಶಿಕ್ಷಕರಲ್ಲೂ ಸ್ಪಷ್ಟತೆ ಇಲ್ಲ. ಇದುವೇ ಗೊಂದಲ ಮೂಡಿಸಿದೆ.

1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು 2025-26ನೇ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು. ಅಂತಹ ಮಗುವಿಗೆ ಮಾತ್ರ ದಾಖಲಾತಿಗೆ ಅವಕಾಶ ದೊರೆಯಲಿದೆ. ಒಂದು ದಿನ ಕಡಿಮೆಯಾದರೂ ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ಇದುವೇ ಪಾಲಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

1ನೇ ತರಗತಿ ಪ್ರವೇಶ ಪಡೆಯುವ ಮಗುವಿಗೆ ಆರು ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022ರ ಜುಲೈನಲ್ಲೇ ಆದೇಶ ಹೊರಡಿಸಿತ್ತು.

ಆದೇಶದಲ್ಲಿ ಯಾವ ವರ್ಷದಿಂದ ಸ್ಪಷ್ಟತೆ ಇರಲಿಲ್ಲ. ಹೀಗಾಗಿ, ಮತ್ತೊಂದು ಆದೇಶ ಹೊರಡಿಸಿ, ಈ ನಿಯಮ 2025-26ನೇ ಸಾಲಿನಿಂದ ಅನ್ವಯವಾಗುವುದು ಎಂದು ಸ್ಪಷ್ಟಪಡಿಸಿತ್ತು. ಇದು ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಅನುಷ್ಠಾನಕ್ಕೆ ಬರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣಕ್ಕೆ ಮಗು ಪ್ರವೇಶ ಪಡೆಯಲು 6 ವರ್ಷ ಪೂರ್ಣಗೊಂಡಿರುವುದು ಕಡ್ಡಾಯವಾಗಿದೆ. ಶಿಕ್ಷಣ ತಜ್ಞರ ಸಲಹೆಯೂ ಅದೇ ಆಗಿದೆ. 23 ರಾಜ್ಯಗಳು ಈಗಾಗಲೇ ನಿಯಮ ಅಳವಡಿಸಿಕೊಂಡಿವೆ.

ರಾಜ್ಯದಲ್ಲೂ 2025-26ನೇ ಸಾಲಿನಿಂದ ನಿಯಮ ಅನ್ವಯವಾಗಲಿದೆ. ಹೀಗಾಗಿ, 4 ವರ್ಷದ ತುಂಬಿದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದರೆ ಮುಂದೆ ಶಾಲಾ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುತ್ತಿರುವ ಮಕ್ಕಳ ಪಾಲಕರು ಶಿಕ್ಷಣ ಇಲಾಖೆಗೆ ನಿತ್ಯವೂ ಕರೆ ಮಾಡಿ ಮಕ್ಕಳ ವಯಸ್ಸಿನ ಕುರಿತು ಪ್ರಶ್ನಿಸುತ್ತಿದ್ದು, ಇದುವೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದೆ.

ಈ ತೀರ್ಮಾನದಿಂದ ನಿಗದಿತ ವಯೋಮಿತಿಗೆ ಒಂದು ದಿನ ಕಡಿಮೆ ಆದರೂ ಮಕ್ಕಳು ದಾಖಲಾತಿಯಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳು ಅನಗತ್ಯವಾಗಿ ಒಂದು ವರ್ಷ ಶಾಲಾ ಪ್ರವೇಶದಿಂದ ವಂಚಿತರಾಗುವುದನ್ನು ತಡೆಯಲು ನಿಗದಿತ ವಯೋಮಿತಿಯಲ್ಲಿ ಕೆಲ ತಿಂಗಳ ಸಡಿಲ ಅಥವಾ ವಿನಾಯಿತಿ ನೀಡಬೇಕೆಂದು ಪಾಲಕರ ಒತ್ತಾಯವಾಗಿದೆ.

2025-26ನೇ ಶೈಕ್ಷಣಿಕ ಸಾಲಿನ ದಾಖಲಾತಿ ಜೂನ್ 1 ರಿಂದ ಅಧಿಕೃತವಾಗಿ ಶುರುವಾಗಲಿದೆ. ಆದರೆ, ಈಗಾಗಲೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. ಮಕ್ಕಳ ದಾಖಲಾತಿಗಾಗಿ ಶಾಲೆಗಳಿಗೆ ಎಡತಾಕುತ್ತಿರುವ ಅನೇಕ ಪಾಲಕರು ನಿಯಮದಿಂದ ಚಿಂತೆಗೀಡಾಗಿದ್ದಾರೆ.

ವಯೋಮಿತಿ ಇಲ್ಲದಿದ್ದರೂ ತಮ್ಮ ಮಕ್ಕಳನ್ನು ಎಲ್‌ಕೆಜಿ ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ಒತ್ತಡ ಹೇರುತ್ತಿದ್ದಾರೆ. ಹಿಂದಿನ ತರಗತಿಗೆ ದಾಖಲಿಸಲು ಒಪ್ಪುತ್ತಿಲ್ಲ ಎಂಬುದು ಖಾಸಗಿ ಶಾಲಾ ಆಡಳಿತ ಮಂಡಳಿಯ ಹೇಳಿಕೆಯಾಗಿದೆ.

ದಾರಿ ತಪ್ಪಿಸುತ್ತಿರುವ ಖಾಸಗಿ ಶಾಲೆಗಳು:

ಈ ನಡುವೆ, ಕೆಲ ಶಾಲೆಗಳು ಎಲ್‌ಕೆಜಿಗೆ 4 ವರ್ಷ ಪೂರ್ಣಗೊಳ್ಳದಿರುವ ಮಕ್ಕಳನ್ನೂ ಸುಳ್ಳು ಮಾಹಿತಿ ನೀಡಿ ದಾಖಲಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಎಲ್‌ಕೆಜಿ, ಯುಕೆಜಿ ಪ್ರವೇಶ ದಾಖಲಾತಿ ಬಗ್ಗೆ ಇಲಾಖೆಯ ವೆಬ್‌ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸುವಂತಿಲ್ಲ. 1ನೇ ತರಗತಿಗೆ ದಾಖಲಾದ ಮಕ್ಕಳ ಹೆಸರು, ವಯಸ್ಸು ಇನ್ನಿತರ ಮಾಹಿತಿ ಮಾತ್ರ ದಾಖಲಿಸಬೇಕು. ಹೀಗಾಗಿ ಎಲ್‌ಕೆಜಿಗೆ ಮಕ್ಕಳ ಪ್ರವೇಶ ಹೆಚ್ಚಿಸಿಕೊಳ್ಳಲು ಪಾಲಕರನ್ನು ಖಾಸಗಿ ಶಾಲೆಗಳು ದಾರಿ ತಪ್ಪಿಸುತ್ತಿವೆ. ಇದಕ್ಕೆ ಅವರು ಮಾರುಹೋಗಬಾರದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ವಯೋಮಾನದವರು ಕಡಿಮೆ ಸಾಧನೆ:

ಕಡಿಮೆ ವಯೋಮಾನದ ಮಕ್ಕಳು ಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ತೋರುತ್ತಾರೆ. ತಮ್ಮ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂತಸದಿಂದ ತೊಡಗುವುದಿಲ್ಲ. ಕಡಿಮೆ ವಯೋಮಾನದವರನ್ನು ಬೇಗ ಶಾಲೆಗೆ ಸೇರಿಸುವುದು ಅವರ ಭವಿಷ್ಯದ ಹಿತದೃಷ್ಟಿಯಿಂದ ಮಾರಕವಾಗಿ ಪರಿಣಮಿಸುತ್ತದೆ. ಅಂತಹ ಮಕ್ಕಳು ಕ್ರೀಡೆ, ಆಟೋಟಗಳಲ್ಲಿ ತಮ್ಮ ತರಗತಿಯ ಹೆಚ್ಚಿನ ವಯೋಮಾನದ ಮಕ್ಕಳಿಗಿಂತ ಹಿಂದೆ ಬೀಳುತ್ತಾರೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ಅಧ್ಯಯನದಲ್ಲಿ ಹಿಂದೆ ಬೀಳುತ್ತಾರೆ: ಅನೇಕ ರಾಷ್ಟ್ರಗಳಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಿಸುವ ವಯಸ್ಸು 6 ವರ್ಷ ಇದೆ. ವಿಶ್ವದಲ್ಲಿ ಅತ್ಯುತ್ತಮವಾದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಫಿನ್ಲೆಂಡ್‌ನಲ್ಲಿ 1ನೇ ತರಗತಿಗೆ ದಾಖಲಾಗಲು ಮಕ್ಕಳಿಗೆ ಕನಿಷ್ಠ 7 ವರ್ಷ ಮತ್ತು ಅಮೆರಿಕ, ಚೀನಾದಲ್ಲಿ 1ನೇ ತರಗತಿಯ ದಾಖಲಾತಿಗೆ 6 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದೆ.

ಮಕ್ಕಳಿಗೆ ಒಂದು ವರ್ಷ ಉಳಿಸುವ ಲೆಕ್ಕಾಚಾರದಲ್ಲಿ ಕೆಲ ಪಾಲಕರು 3 ವರ್ಷವಾಗುವ ಮೊದಲೇ ಅವರನ್ನು ಎಲ್‌ಕೆಜಿಗೆ ದಾಖಲಿಸುತ್ತಾರೆ. ಈ ರೀತಿ ಸೂಕ್ತ ವಯಸ್ಸಿಗೆ ಮೊದಲೇ ತರಾತುರಿಯಲ್ಲಿ ಶಾಲೆಗೆ ದಾಖಲಾಗುವ ಮಕ್ಕಳು ಸರಿಯಾದ ವಯೋಮಾನ ಅಥವಾ ಹೆಚ್ಚಿನ ವಯೋಮಾನದವರಾದ ಮಕ್ಕಳಿಗಿಂತ ಅಧ್ಯಯನದಲ್ಲಿ ಹಿಂದೆ ಬೀಳುತ್ತಾರೆ.

ಪಾಲಕರ ಆಗ್ರಹ ಏನು?

ಹಿಂದೆ ಎಲ್‌ಕೆಜಿ ದಾಖಲಾತಿಗೆ 3.10 ವರ್ಷದಿಂದ 4.10 ವರ್ಷ, 1ನೇ ತರಗತಿಗೆ 5.10 ವರ್ಷದಿಂದ 6.10 ವರ್ಷದತನಕ ವಯೋಮತಿ ಇತ್ತು. ಈ ನಿಯಮವನ್ನೇ ಮತ್ತೆ ಜಾರಿಗೆ ತಂದರೆ ಉತ್ತಮ ಎಂದು ಪಾಲಕರ ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳನ್ನು ಪ್ರಾಥಮಿಕ ಶಾಲಾ 1ನೇ ತರಗತಿ ದಾಖಲಾತಿ ವಯೋಮಿತಿ ಮುಂದಿನ 2025-26ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರಲಿದೆ. ಸದ್ಯಕ್ಕೆ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬರುವ ಸೂಚನೆ ಪಾಲನೆ ಮಾಡಲಾಗುವುದು. ಎಸ್.ಟಿ. ಜವರೇಗೌಡ ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ *ನಿಗದಿತ ವಯಸ್ಸಿಗೆ ಕೆಲವೇ ದಿನ ಅಥವಾ ತಿಂಗಳುಗಳಷ್ಟು ಕಡಿಮೆ ವಯೋಮಾನದವರಾದ ಮಕ್ಕಳು ಎಲ್‌ಕೆಜಿ ಅಥವಾ ಯುಕೆಜಿ ತರಗತಿಯನ್ನು ಪುನರಾವರ್ತಿಸಬೇಕಾಗುತ್ತದೆ. ಇದರಿಂದ ಮಕ್ಕಳಿಗೆ ಒಂದು ವರ್ಷ ನಷ್ಟವಾಗುವುದರ ಜತೆಗೆ ಆರ್ಥಿಕ ಹೊರೆಯೂ ಆಗುತ್ತದೆ. ವಸಂತ, ಪಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net