

ಶ್ರೀರಂಗಪಟ್ಟಣ: ಕ್ಷೇತ್ರದ ಜನರೊಂದಿಗೆ ನ.19ರಂದು ಕನ್ನಡ ರಾಜ್ಯೋತ್ಸವ ಹಾಗೂ ಅಂಬಿ ಸ್ಮರಣೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ದಿ.ಎನ್.ಶಂಕರೇಗೌಡ ಟ್ರಸ್ಟ್ ಮುಖ್ಯಸ್ಥ ಹಾಗೂ ಯುವ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಪೂರ್ವ ಸಿದ್ಧತೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀರಂಗಪಟ್ಟಣದಲ್ಲಿ ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಬಹುದಿನಗಳ ಆಸೆ ಈಡೇರುವ ಕಾಲ ಕೂಡಿ ಬಂದಿದೆ, ನವೆಂಬರ್‌ನಲ್ಲಿಯೇ ರೆಬೆಲ್‌ಸ್ಟಾರ್ ಅಂಬರೀಷ್ ಅಮರರಾದ ಹಿನ್ನೆಲೆ ಒಂದೇ ವೇದಿಕೆಯಲ್ಲಿ ಕನ್ನಡರಾಜ್ಯೋತ್ಸವ ಹಾಗೂ ಅಂಬಿ ಸ್ಮರಣೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನ.19ರಂದು ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮೈದಾನದಲ್ಲಿ ನಡೆಯುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯ ಸರ್ಕಾರದ ಹಲವಾರು ಸಚಿವರು, ಸಂಸದರು, ವಿವಿಧ ಪ್ರಭಾವಿ ಜನಪ್ರತಿನಿಧಿಗಳು, ಚಂದನವನದ ಖ್ಯಾತ ನಟ-ನಟಿಯರು, ಕಿರುತೆರೆ ಕಲಾವಿದರು, ಚಲನಚಿತ್ರದ ಪ್ರಸಿದ್ಧ ಹಿನ್ನೆಲೆ ಗಾಯಕರು ಆಗಮಿಸುತ್ತಿದ್ದಾರೆ, ಬೃಹತ್ ರಸಸಂಜೆ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಕುಳಿತು ವೀಕ್ಷಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಶ್ರೀಧರ್, ಸೂನಗಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರ, ಬೆಳಗೊಳ ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ದೇವರಾಜು, ಕಂಠಿರಘು, ಪ್ರಭಾಕರ್, ಜೈಕುಮಾರ್, ಚೇತನ್ ಮತ್ತಿತರರಿದ್ದರು.