

ಮೈಸೂರು: ಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ‘ಉದ್ಯಮಿ ಒಕ್ಕಲಿಗ ಸಮಾವೇಶ-2024’ ಜ.19 ರಿಂದ 21ರವರೆಗೆ ಮೂರು ದಿನಗಳ ಕಾಲ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಪೆವಿಲಿಯನ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸದಸ್ಯ ರವಿಶಂಕರ್ ತಿಳಿಸಿದರು.
ಸಮಾವೇಶದಲ್ಲಿ ನೂರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್‌ಎಂಇ, ಮನರಂಜನೆ, ನವೋದ್ಯಮ, ಆಹಾರ-ಆತಿಥ್ಯ ಸೇರಿದಂತೆ ಒಟ್ಟು 12 ಉದ್ಯಮ ಕ್ಷೇತ್ರಗಳ ಬಗ್ಗೆ ಚಿಂತನ - ಮಂಥನ ನಡೆಯಲಿದ್ದು, ಸಮುದಾಯದ ಸಮಗ್ರ ಅಭಿವೃದ್ಧಿ ಜತೆಗೆ ರಾಜ್ಯದ ಆರ್ಥಿಕತೆಗೆ ಸಹಾಯ ಮಾಡುವ ನಿರೀಕ್ಷೆಯಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ತಮಿಳುನಾಡಿನ ಚೆನ್ನೈ, ಕೊಯಮತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ ಮತ್ತು ಕಂಬಂ ಜಿಲ್ಲೆಗಳಿಂದ ಸಮುದಾಯದ 500ಕ್ಕೂ ಹೆಚ್ಚು ಉದ್ಯಮಿಗಳು, 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಜ.19ರ ಸಂಜೆ ಒಕ್ಕಲಿಗ ಸಂಸ್ಕೃತಿಯ ಪರಿಚಯಿಸಲು ‘ದೇವಿ ಮಹಾತ್ಮೆ’ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಉದ್ಯಮ ಕುರಿತಾದ ಕೌಶಲಗಳನ್ನು ಬೆಳೆಸಲು ಉದ್ಯಮಿದಾರರು ತರಬೇತಿ ನೀಡಲಿದ್ದಾರೆ. ಜ.21ರ ಸಂಜೆ 4 ಗಂಟೆಗೆ ಡಾ.ಶ್ರೀ ನಂಜಾವಧೂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಶಿವಕುಮಾರ್, ಮುಖಂಡರಾದ ದೊರೆಸ್ವಾಮಿ, ಸಿದ್ದರಾಜು ಇದ್ದರು.