19, 20ರಂದು ಗೋಳಿದಡಿಗುತ್ತಿನ ವರ್ಷದ ‘ಗುತ್ತುದ ಪರ್ಬೊ’ : ಹೊಸ ಸಂವತ್ಸರದ ಆದಿಯಲ್ಲಿ ಶ್ರೀ ಮಹಾಕಾಲೇಶ್ವರ ಮೂರ್ತಿ ಪ್ರತಿಷ್ಠಾಪನೆ

New Project (26)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಹೊಸ ಸಂವತ್ಸರದ ಆದಿಭಾಗದಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಬ್ರಹ್ಮಕಲಶ ಪ್ರತಿಷ್ಠಾಪನಾ ಸಂಭ್ರಮ ನಡೆಯಲಿರುವುದರಿಂದ ಜ.19 ಮತ್ತು 20ರಂದು ಗುರುಪುರ ಗೋಳಿದಡಿಗುತ್ತಿನ ವಾರ್ಷಿಕ ‘ಗುತ್ತುದ ಪರ್ಬೊ’ ಸರಳ ಮತ್ತು ಸಾಂಪ್ರದಾಯಿಕ ಪಡಿಯಚ್ಚಿನಲ್ಲಿ ನಡೆಯಲಿದೆ. ಜ.19ರಂದು ರಾತ್ರಿ 7ರಿಂದ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 20ರಂದು ಸಂಜೆ 6ರಿಂದ 8ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ 8.30ರಿಂದ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‌ದಾಸ್ ಅವರಿಂದ ‘ಏಕ್ ಶಾಮ್ ರಫೀಕೆ ನಾಮ್’ ಹಳೆಯ ಹಾಡುಗಳ ರಸಮಂಜರಿ ಸಾದರಗೊಳ್ಳಲಿದೆ. ಜತೆಗೆ ಎರಡೂ ದಿನ ಗೋಳಿದಡಿಗುತ್ತಿನಲ್ಲಿ ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ. ಪರ್ಬದ ಕುರಿತಾಗಿ ಗುತ್ತಿನ ಚಾವಡಿಯಲ್ಲಿ ಭಾನುವಾರ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಉಪಸ್ಥಿತಿಯಲ್ಲಿ ಗುತ್ತು ಮನೆತನದವರು, ಚಾವಡಿ ಮಿತ್ರರ ಸಮಾಲೋಚನಾ ಸಭೆ ನಡೆಯಿತು. ಗುತ್ತಿನ ಪರ್ಬದ ಎರಡು ದಿನವೂ ಅತಿಥಿ ಸತ್ಕಾರ, ಪ್ರಸಾದ ವಿತರಣೆ ಮತ್ತು ನಿರಂತರ ಊಟೋಪಚಾರದಲ್ಲಿ ಯಾವುದೇ ರೀತಿಯ ತೊಡಕು ಉಂಟಾಗಬಾರದು ಎಂದು ಗಡಿಕಾರರು ಮನವಿ ಮಾಡಿದರು. ಏಕಶಿಲಾ ಮೂರ್ತಿ: ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರ ಕಾರಮೊಗರು ಪ್ರದೇಶದಲ್ಲಿ ಈ ವರ್ಷ ಕಂಗೊಳಿಸಲಿದೆ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿ. ಮೂರ್ತಿ ನಿರ್ಮಾಣಕ್ಕಾಗಿ 2020ರ ಮೇ 11ರಂದು ವೇಣೂರಿನಿಂದ 183 ಟನ್ ಭಾರ, 22 ಅಡಿ ಉದ್ದ, ಒಂಬತ್ತುವರೆ ಅಡಿ ಅಗಲ ಹಾಗೂ ಆರೂವರೆ ಅಡಿ ದಪ್ಪದ ಬಹತ್ ಏಕಶಿಲಾ ದಿಬ್ಬ ಇಲ್ಲಿಗೆ ವಿಶೇಷ ಟ್ರಕ್ ಮೂಲಕ ತರಲಾಗಿತ್ತು. ಬೆಳ್ತಂಗಡಿಯ ಲಾಲದ ವೆಂಕಟೇಶ ಆಚಾರ್ಯ ಮತ್ತು ಬಳಗದ ಶಿಲ್ಪಿಗಳು ಮಹಾಕಾಲನ ಮೂರ್ತಿ ಕೆತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಹೊಸ ಸೇತುವೆಯ ಪಕ್ಕದಲ್ಲೇ ದಕ್ಷಿಣ ಭಾರತದಲ್ಲೇ ಪ್ರಥಮವಾದ ಏಕಶಿಲೆಯ ಶ್ರೀ ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿ ಬಯಲು ಆಲಯ ತಲೆ ಎತ್ತಲಿದೆ. ಇಲ್ಲಿ ದೇಶದಲ್ಲೇ ವಿಶಿಷ್ಟ ರೀತಿಯಲ್ಲಿ ಶ್ರೀ ಮಹಾಕಾಲನ ಆರಾಧನೆ ನಡೆಯಲಿದೆ. ನದಿ ತೀರದಲ್ಲಿ 22 ಅಡಿ ಎತ್ತರಕ್ಕೆ ನಿರ್ಮಾಣಗೊಳ್ಳುತ್ತಿರುವ 5 ಹಂತಗಳ ‘ಪದ್ಮ’ದ ಒಂದೊಂದು ಹಂತದಲ್ಲಿ ವಿವಿಧ ಶಿಲಾ ಕುಸುರಿಯ ಕಲಾಕೃತಿಗಳು ಕಂಗೊಳಿಸಲಿವೆ. 22 ಅಡಿ ಎತ್ತರದ ಪದ್ಮದ ಮೇಲೆ 22 ಅಡಿ ಎತ್ತರದ ಶ್ರೀ ಮಹಾಕಾಲೇಶ್ವರ ದೇವರ ಶಿಲಾಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಭಕ್ತರು ಬಯಲು ಆಲಯದ ಮೇಲೇರಿ 6 ಹಸ್ತಗಳಿರುವ ಶಿವನ ಮೂರ್ತಿ ಸ್ಪರ್ಶಿಸಿ ಪೂಜೆ ಮಾಡುವ ಅವಕಾಶವಿರುತ್ತದೆ. ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಶಿರೋಮಣಿ ಕೆ.ಎಸ್.ನಿತ್ಯಾನಂದ ನಿರ್ದೇಶನದಂತೆ ಪುನರುತ್ಥಾನಗೊಳ್ಳುತ್ತಿರುವ ಶ್ರೀ ಮಹಾಕಾಲೇಶ್ವರ ದೇವರ ಬಯಲು ಆಲಯವು ನಾಡಿನ ಶ್ರದ್ಧಾ ಭಕ್ತಿಯ ಸಾನ್ನಿಧ್ಯವಾಗಲಿದೆ. ಈಗಾಗಲೇ ಶೇ.80ರಷ್ಟು ಕೆತ್ತನೆ ಕೆಲಸ ಮುಗಿದಿದೆ. ಬಯಲು ಆಲಯದ ಬ್ರಹ್ಮಕಲಶ ಪ್ರತಿಷ್ಠಾಪನಾ ಸಂಭ್ರಮದ ದಿನಾಂಕ ಶೀಘ್ರ ನಿಗದಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net