

*ಪಿ.ಬಿ.ಹರೀಶ್ ರೈ
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ದಶಕಗಳ ಕಾಲ ಕಾಂಗ್ರೆಸ್‌ನದ್ದೇ ಪ್ರಾಬಲ್ಯವಿತ್ತು. ಲೋಕಸಭೆಯಲ್ಲಿ ಜನಾರ್ದನ ಪೂಜಾರಿ ಮತ್ತು ಆಸ್ಕರ್ ಫೆರ್ನಾಂಡಿಸ್,ವಿಧಾನಸಭೆಯಲ್ಲಿ ವೀರಪ್ಪ ಮೊಯ್ಲಿ ಸೋಲಿಲ್ಲದ ಸರದಾರರಾಗಿ ಮೆರೆದಿದ್ದರು. ಆದರೆ ಈ ಮೂವರು ನಾಯಕರು 1998ರ ಲೋಕಸಭಾ ಚುನಾವಣೆಯಲ್ಲಿ ಒಮ್ಮೆಗೆ ಸೋಲು ಕಂಡದ್ದು ವಿಶೇಷ. ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಏಕಕಾಲದಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಕಾಂಗ್ರೆಸ್ ದಿಗ್ಗಜರಿಗೆ ಸೋಲುಣಿಸಿತ್ತು. ಪೂಜಾರಿ ಅವರಿಗೆ ಅದು ಹ್ಯಾಟ್ರಿಕ್ ಸೋಲಾಗಿದ್ದರೆ, ಆಸ್ಕರ್ ಮತ್ತು ಮೊಯ್ಲಿ ಅವರಿಗೆ ಮೊದಲ ಸೋಲಿನ ಆಘಾತ.
* 96 ಚುನಾವಣೆಯಲ್ಲಿ :
ಮಂಗಳೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿದ್ದ ಜನಾರ್ದನ ಪೂಜಾರಿ ಅವರು 1991ರಲ್ಲಿ ಮೊದಲ ಸೋಲು
ಅನುಭವಿಸಿದರೆ,96ರ ಚುನಾವಣೆಯಲ್ಲಿ 2ನೇ ಸೋಲು ಕಂಡರು. ಅತ್ತ ಉಡುಪಿ ಕ್ಷೇತ್ರದಲ್ಲಿ ಸತತ 4 ಜಯ ದಾಖಲಿಸಿದ್ದ ಆಸ್ಕರ್ ಫೆರ್ನಾಂಡಿಸ್ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ವಿರುದ್ಧ ಕೇವಲ 2,454 ಮತಗಳ ಅಂತರದ ಪ್ರಯಾಸದ ಜಯ ಸಾಧಿಸಿ 5ನೇ ಬಾರಿ ಸಂಸತ್ ಪ್ರವೇಶಿಸಿದ್ದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನತಾದಳದ ಬಿ.ಎಲ್.ಶಂಕರ್ ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ ವಿರುದ್ಧ ಜಯ ಸಾಧಿಸಿದ್ದರು. ಬಿಜೆಪಿ ಮೂರನೇ ಸ್ಥಾನ ಪಡೆದಿತ್ತು. ಆಗ ದ.ಕ.ಜಿಲ್ಲೆಯ ಸುರತ್ಕಲ್ ಮತ್ತು ಬಂಟ್ವಾಳ ಕ್ಷೇತ್ರ ಉಡುಪಿ ಹಾಗೂ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿತ್ತು.
* 2ವರ್ಷದಲ್ಲಿ ಚುನಾವಣೆ
1996ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ. 13 ದಿವಸದಲ್ಲಿ ವಾಜಪೇಯಿ ಸರ್ಕಾರ ಉರುಳಿದರೆ, ಒಂದೂವರೆ ವರ್ಷದಲ್ಲಿ ದೇವೇ ಗೌಡ ಮತ್ತು ಐ.ಕೆ.ಗುಜ್ರಾಲ್ ಅವರು ಮಾಜಿ ಪ್ರಧಾನಿಗಳಾಗಿದ್ದರು. 1998ರಲ್ಲಿ ಮತ್ತೆ ಚುನಾವಣೆ ಎದುರಾಯಿತು. ಕರಾವಳಿಯಲ್ಲಿ ಆಗ ವಾಜಪೇಯಿ ಪರ ಅಲೆ ಎದ್ದಿತ್ತು. ಕಾಂಗ್ರೆಸ್ ಶಕ್ತಿ ಕುಂದಿತ್ತು. ಪೂಜಾರಿ, ಆಸ್ಕರ್ ಜತೆ ರಾಷ್ಟ್ರ ರಾಜಕೀಯ ಪ್ರವೇಶಿಸಲು ಬಯಿಸಿದ ವೀರಪ್ಪ ಮೊಯ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡರು.
* ಮೂವರಿಗೂ ಸೋಲು :
ಮಂಗಳೂರು ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ 3ನೇ ಬಾರಿ ಸೋಲು ಅನುಭವಿಸಿದರೆ, ಬಿಜೆಪಿಯ ಧನಂಜಯ ಕುಮಾರ್ ಹ್ಯಾಟ್ರಿಕ್ ಜಯ ಸಾಧಿಸಿದರು. ಅತ್ತ ಉಡುಪಿಯಲ್ಲಿ ಪ್ರಥಮ ಬಾರಿಗೆ ಆಸ್ಕರ್ ಸೋಲು ಕಂಡರು. ಹಿಂದಿನ ಚುನಾವಣೆಯಲ್ಲಿ ಕೂದಲೆಳೆ ಅಂತರದ ಸೋಲು ಅನುಭವಿಸಿದ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ಜಯ ಸಾಧಿಸಲು ಯಶಸ್ವಿಯಾದರು. ಒಂದೇ ಸೋಲಿನಲ್ಲಿ ಕೊನೆ. ಮತ್ತೆ ಆಸ್ಕರ್ ಲೋಕಸಭೆಗೆ ಸ್ಪರ್ಧಿಸುವ ಗೋಜಿಗೆ ಹೋಗಿಲ್ಲ. ಸತತವಾಗಿ ರಾಜ್ಯಸಭೆಗೆ ಆಯ್ಕೆಯಾದರು.
* ಅಚ್ಚರಿಯ ಫಲಿತಾಂಶ
ಅತ್ತ ಚಿಕ್ಕಮಗಳೂರು ಕ್ಷೇತ್ರದಲ್ಲೂ ಅಚ್ಚರಿಯ ಫಲಿತಾಂಶ. 3ನೇ ಸ್ಥಾನದಲ್ಲಿ ಬಿಜೆಪಿ ಪ್ರಥಮ ಸ್ಥಾನಕ್ಕೆ ನೆಗೆದು ಡಿ.ಸಿ.ಶ್ರೀಕಂಠಪ್ಪ ಸಂಸದರಾಗಿದ್ದರು. ಸಂಸದರಾಗಿದ್ದ ಜನತಾ ದಳದ ಬಿ.ಎಲ್.ಶಂಕರ್‌ಗೆ 3ನೇ ಸ್ಥಾನಕ್ಕೆ ಕುಸಿದಿದ್ದರು. ವೀರಪ್ಪ ಮೊಯ್ಲಿ ಅವರ ಕನಸು ಭಗ್ನವಾಗಿತ್ತು. 2 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಒಂದೇ ವರ್ಷದಲ್ಲಿ (1999) ಮತ್ತೆ ಚುನಾವಣೆ ನಡೆದಿತ್ತು. ಮಂಗಳೂರು ಮತ್ತು ಚಿಕ್ಕಮಗಳೂರು ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡರೆ, ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನಯಕುಮಾರ್ ಸೊರಕೆ ಜಯಸಾಧಿಸಿದ್ದರು.