ಮೊದಲ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ

25_06_Mdy_Sslc Exam 01
Published on

ವಿಜಯವಾಣಿ ಸುದ್ದಿಜಾಲ ಮಂಡ್ಯ

ಕರೊನಾ ವೈರಸ್ ಸೋಂಕಿನ ಆತಂಕದ ನಡುವೆಯೂ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಮೊದಲ ದಿನ ಇಂಗ್ಲಿಷ್ ಭಾಷಾ ವಿಷಯದ ಪರೀಕ್ಷೆ ನಿರಾತಂಕವಾಗಿ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು 20,321 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 19,776 ವಿದ್ಯಾರ್ಥಿಗಳು ಹಾಜರಾದರೆ, 545 ವಿದ್ಯಾರ್ಥಿಗಳು ಗೈರಾದರು. ಗೈರಾದವರ ಪೈಕಿ 99 ಖಾಸಗಿ ಅಭ್ಯರ್ಥಿಗಳಿದ್ದಾರೆ. ಇನ್ನು ಹೊರ ಜಿಲ್ಲೆಗಳಿಂದ ಆಗಮಿಸಿ ಮಂಡ್ಯ ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 225 ವಿದ್ಯಾರ್ಥಿಗಳು ಹಾಜರಾಗಿದ್ದರು.

ಎಂಟು ಬ್ಲಾಕ್‌ಗಳ 82 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಈ ಪೈಕಿ ಮಂಡ್ಯದ ಸೆಂಟ್ ಜಾನ್ ಪ್ರೌಢಶಾಲೆ ಮತ್ತು ರೋಟರಿ ಪ್ರೌಢಶಾಲೆಯನ್ನು ಅತಿ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿತ್ತು. ಎಲ್ಲ ಕೇಂದ್ರಗಳಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಯಿತು. ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ನಡುವೆ 3 ಅಡಿ ದೈಹಿಕ ಅಂತರ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೇ ನಿಯಮವನ್ನು ಥರ್ಮಲ್ ಸ್ಕ್ರೀನಿಂಗ್ ಮಾಡುವ ವೇಳೆಯೂ ಅನುಸರಿಸಲಾಯಿತು. ಜ್ವರ, ನೆಗಡಿ, ಕೆಮ್ಮುನಿಂದ ಬಳಲುತ್ತಿದ್ದ 15 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು. ಕೆಲವೆಡೆ ಮಕ್ಕಳನ್ನು ಪರೀಕ್ಷೆ ಬರೆಯಲು ಕಳುಹಿಸುವ ಭರದಲ್ಲಿ ಪಾಲಕರು ದೈಹಿಕ ಅಂತರ ಕಾಪಾಡಿಕೊಳ್ಳುವಲ್ಲಿ ವಿಫಲರಾದರು.

ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ವಾಹನ ಸಮಸ್ಯೆಯಾದರೆ ಸಹಾಯವಾಗಲೆಂದು ಪ್ರತಿ ತಾಲೂಕಿನಲ್ಲಿಯೂ ಬಸ್ ಸೌಲಭ್ಯ ಮಾಡಲಾಗಿತ್ತು. ಜಿಲ್ಲಾ ಮತ್ತು ತಾಲೂಕು ಖಜಾನೆಯಲ್ಲಿರಿಸಿದ್ದ ಪ್ರಶ್ನೆಪತ್ರಿಕೆಗಳನ್ನು ತಹಸೀಲ್ದಾರ್ ಮತ್ತು ಬಿಇಒ ಸಮ್ಮುಖದಲ್ಲಿ ಕೇಂದ್ರಕ್ಕೆ ರವಾನಿಸಲಾಯಿತು.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನಗರದ ಕಾರ್ಮೆಲ್ ಕಾನ್ವೆಂಟ್ ಮತ್ತು ಮಾಜಿ ಪುರಸಭೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಯಾವುದೇ ರೀತಿಯಲ್ಲೂ ಆತಂಕಪಡದೆ, ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಶೇಷ ಪೂಜೆ, ಮಾಸ್ಕ್ ವಿತರಣೆ:

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಳಿತಾಗಲೆಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ವಿದ್ಯಾನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಲ್ಲು ಕಟ್ಟಡ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಶುಭ ಕೋರಿದರು. ಮುಖಂಡರಾದ ಸಿ.ಟಿ.ಮಂಜುನಾಥ್, ಹೊಸಹಳ್ಳಿ ನಾಗೇಶ್, ಸಿದ್ದರಾಜುಗೌಡ, ಮಲ್ಲಿಕಾರ್ಜುನ್, ನಾಗಣ್ಣ ಮಲ್ಲಪ್ಪ, ಮಾದರಾಜ ಅರಸ್, ಹೊಸಹಳ್ಳಿ ಶೇಖರ್ ಇತರರಿದ್ದರು.

ಜಿಲ್ಲೆಯಲ್ಲಿ ಇಂಗ್ಲಿಷ್ ವಿಷಯದ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯ ಸಹಕಾರ ಉತ್ತಮವಾಗಿತ್ತು. ಅಂತೆಯೆ, ಪಾಲಕರು ಪರೀಕ್ಷಾ ಕೇಂದ್ರಕ್ಕೆ ಬಂದಾಗ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಈ ಮೂಲಕ ಉಳಿದ ವಿಷಯ ಪರೀಕ್ಷೆಗಳೂ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕು.

ರಘುನಂದನ್ ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net