

ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಸನ ತಾಲೂಕಿನ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಯ 195 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಾಸಕ ಎಚ್.ಡಿ.ರೇವಣ್ಣ ಅವರು ಗುರುವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು.
ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿದ ನಂತರ ಮಾತನಾಡಿದ ರೇವಣ್ಣ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಿದ್ದರು. ಈಗಾಗಲೇ 154 ಹೊಸ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಸದರಿ ಯೋಜನೆಗೆ ಡಿಸ್ಟ್ರಿಬ್ಯೂಷನ್ ಸೇರಿ ಒಟ್ಟು 450 ಕೋಟಿ ರೂ. ಖರ್ಚಾಗಿದೆ. ದುದ್ದ, ಬೈರಾಪುರ, ಶಾಂತಿಗ್ರಾಮ ಸೇರಿ 195 ಹಳ್ಳಿಗಳಿಗೆ ಟ್ರಯಲ್ ರನ್ ಮೂಲಕ ನೀರು ಸರಬರಾಜು ಆಗಲಿದೆ. ಇಂದು 125 ಹಳ್ಳಿಗಳಿಗೆ ನೀರು ಹೋಗಲಿದೆ. ಮುಂದಿನ 1 ತಿಂಗಳಲ್ಲಿ 195 ಹಳ್ಳಿಗೂ ಶುದ್ಧ ಕುಡಿಯುವ ನೀರು ಹೋಗಲಿದೆ. ಈ ಯೋಜನೆ ಅನುಷ್ಠಾನದಿಂದ 195 ಗ್ರಾಮಗಳ ವ್ಯಾಪ್ತಿಯ ಒಬ್ಬ ವ್ಯಕ್ತಿಗೆ ಪ್ರತಿದಿನ 85 ಲೀಟರ್ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಒಟ್ಟು 1,13,621 ಮಂದಿ ನದಿ ಮೂಲದಿಂದ ಕುಡಿಯುವ ನೀರು ಪಡೆಯಲಿದ್ದಾರೆ ಎಂದು ಹೇಳಿದರು.
ಬಾಕಿ ಇರುವ 30-40 ಟ್ಯಾಂಕ್ ಕಟ್ಟುವುದು ಬಾಕಿ ಇದ್ದು, ಆ ಕಾಮಗಾರಿಯನ್ನೂ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದುದ್ದ-ಶಾಂತಿಗ್ರಾಮ ಹೋಬಳಿಯಂತೆಯೇ ಇಡೀ ದಂಡಿನಹಳ್ಳಿ ಹೋಬಳಿ, ಕುಂಬೇನಹಳ್ಳಿ ಹೋಬಳಿ, ಆನೆಕೆರೆಯ 85 ಹಳ್ಳಿ ಮತ್ತು ಹೊನ್ನಶೆಟ್ಟಿಹಳ್ಳಿಯ ಎಲ್ಲಾ ಹಳ್ಳಿಗಳಿಗೆ ನದಿ ಮೂಲದ ನೀರು ಸರಬರಾಜು ಮಾಡಲಾಗುವುದು. ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ಸುಮಾರು 4500 ಕೋಟಿ ರೂ. ಕುಡಿಯುವ ನೀರಿನ ಯೋಜನೆಗಾಗಿ ಬಂದಿದೆ ಎಂದು ತಿಳಿಸಿದರು.