

ಹಾಸನ: ಮಂತ್ರಾಕ್ಷತೆ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಬಾಲಿಶ ಹೇಳಿಕೆ ನೀಡಿದ್ದಾರೆ ಬೇಕಾದರೆ ತನಿಖೆಗೆ ಆದೇಶ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿ.ಕೆ.ಶಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಚಿಕ್ಕಮಗಳೂರಿಗೆ ತೆರಳುವ ಮಾರ್ಗ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರರು, ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ರೈತರು ಬೆಳೆದಿರುವ ಅಕ್ಕಿಯನ್ನು ಮಂತ್ರಾಕ್ಷತೆ ಮಾಡಿ ಮನೆ ಮನೆಗೆ ಹಂಚುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಆ ಬಗ್ಗೆ ಸಣ್ಣತನದಲ್ಲಿ ಮಾತನಾಡುವುದು ಅನಾವಶ್ಯಕ, ಅನ್ನಭಾಗ್ಯ ಯೋಜನೆಯಡಿ ಈ ಸರ್ಕಾರ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆ ಪ್ರಕಾರ ನುಡಿದಂತೆ ನಡೆಯಬೇಕಿತ್ತು. ಈ ಕ್ಷಣದವರೆಗೂ 10 ಕೆ.ಜಿ. ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಮಂತ್ರಾಕ್ಷತೆ ಮಾಡಿರುವ ಅಕ್ಕಿ ಬೆಳೆದಿರುವನು ರೈತ, ಆ ಬಗ್ಗೆ ತನಿಖೆ ಮಾಡಲು ಆದೇಶ ನೀಡಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಪ್ರತಿ ತಿಂಗಳು ಅಕ್ಕಿಯನ್ನು ನೀಡಲು ಪಡಿತರ ಮಾಲೀಕರಿಂದ ತೆಗೆದುಕೊಂಡು ಹೋಗಿದ್ದಾರೋ, ಇಲ್ಲ ಕಳ್ಳ ಸಾಗಣೆ ಮಾಡಿದ್ದಾರೋ ಗೊತ್ತಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಈ ಸರ್ಕಾರದ ಮಂತ್ರಿಯ ಸಹಾಯಕ, ದೊಡ್ಡಮಟ್ಟದಲ್ಲಿ ಅಕ್ಕಿಯನ್ನು ರವಾನೆ ಮಾಡಿದ್ದಾರೆ, ಅದೇ ರೀತಿ ಅಕ್ಕಿಯನ್ನು ಬಿಜೆಪಿಯವರು ರವಾನೆ ಮಾಡಿದ್ದಾರೋ ಎನ್ನುವ ಬಗ್ಗೆ ತನಿಖೆ ಮಾಡಿ ಜನಗಳ ಮುಂದೆ ಇಡುವ ಮೂಲಕ ಅಂತಿಮವಾದ ತೆರೆ ಎಳೆಯಲಿ ಎಂದು ಸಲಹೆ ನೀಡಿದರು.
ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ನಮ್ಮ ದೇಶದ ಸಂವಿಧಾನ ವ್ಯವಸ್ಥೆಯಲ್ಲಿ ಯಾವುದೇ ವಿಷಯದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಸಾರ್ವಜನಿಕರಿಗೆ ತೊಂದರೆ, ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸಿಲಿ. ಈ ಸರ್ಕಾರ ನಾವು ಸಂವಿಧಾನದ ರಕ್ಷಕರು ಎಂದು ಜಾಗಟೆ ಹೊಡೆಯುವವರು, ಈ ರೀತಿ ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸುವುದರಿಂದ ಯಾವ ರೀತಿ ಸಂವಿಧಾನ ರಕ್ಷಣೆ ಮಾಡುತ್ತಾರೆ? ಯಾವ ಆಧಾರದ ಮೇಲೆ ಕೇಸ್ ಹಾಕಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದೆ. ಅದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಇರುವ ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ರಾಜ್ಯದ 28ಕ್ಕೆ 28 ಕ್ಷೇತ್ರದಲ್ಲಿ ಮೈತ್ರಿಯ ಅಭ್ಯರ್ಥಿಗಳು ಗೆಲ್ಲುವ ದೃಷ್ಟಿಯಿಂದ ನಾನು ಯಾರನ್ನು ಬೇಕಾದರೂ ಭೇಟಿ ಮಾಡಲು ತಯಾರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಮಮಂದಿರ ಉದ್ಘಾಟನೆಗೆ ಸಿಎಂ, ಡಿಸಿಎಂ ಆಹ್ವಾನ ನೀಡದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದಕ್ಕೆ ಸ್ಪಷ್ಟೀಕರಣ ಈಗಾಗಲೇ ಕೊಟ್ಟಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರ ಏನಿಲ್ಲ, ಇದು ದೇವಸ್ಥಾನ ನಿರ್ಮಾಣದ ಟ್ರಸ್ಟಿನವರು ತೆಗೆದುಕೊಂಡಿರುವ ನಿರ್ಧಾರ. ಎಲ್ಲಾ ವಿಐಪಿಗಳು ಬಂದಾಗ ಅಲ್ಲಿ ತೊಂದರೆಯಾಗುತ್ತದೆ ಎನ್ನುವ ದೃಷ್ಟಿಯಿಂದ ತೀರ್ಮಾನ ಮಾಡಿರಬಹದು, ಸರ್ಕಾರಕ್ಕೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದರು.