

ಹನೂರು: ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್ ಹಾಗೂ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಜರುಗಿತು.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಶಿಬಿರಕ್ಕೆ ಹನೂರು ಸೇರಿದಂತೆ ಮಂಗಲ, ಗುಂಡಾಪುರ, ಆರ್.ಎಸ್ ದೊಡ್ಡಿ, ಲೊಕ್ಕನಹಳ್ಳಿ, ಬೆಳತ್ತೂರು, ಉದ್ದನೂರು, ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಅಜ್ಜೀಪುರ, ಎಲ್ಲೇಮಾಳ, ಚಿಂಚಳ್ಳಿ, ಹಾಗೂ ಇನ್ನಿತರ ಕಡೆಗಳಿಂದ ಸುಮಾರು 191 ಜನರು ನೋಂದಾಯಿಸಿಕೊಂಡಿದ್ದು, ತಪಾಸಣೆಗೆ ಒಳಗಾದರು. ಇದರಲ್ಲಿ ತೀವ್ರ ಕಣ್ಣಿನ ನ್ಯೂನತೆಯಿರುವ 74 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 60 ಜನರನ್ನು ಸೋಮವಾರ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಿದ್ದು, ಉಳಿದ 14 ಜನರನ್ನು ಜು.5 ರಂದು ಕರೆದೊಯ್ಯಲಿದ್ದಾರೆ. ಇದೇ ವೇಳೆ ಕಳೆದ ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದವರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.
ಶಿಬಿರದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ. ಸಾಖೀರ್, ಡಾ.ರಾಗಿಪುಲ್ ಶಿಬಿರದ ಕ್ಷೇತ್ರಾಧಿಕಾರಿ ಸುನೀಲ್‌ಕುಮಾರ್, ಮುಖಂಡರಾದ ಲೋಕೇಶ್‌ಜತ್ತಿ, ಅರವಿಂದ್ ಇತರರು ಇದ್ದರು.