190 ಅರ್ಜಿ ಸಲ್ಲಿಕೆ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

1
Published on

ಚನ್ನಪಟ್ಟಣ: ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಸಾರ್ವಜನಿಕರು ದೂರು ಸಲ್ಲಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. 190ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದವು. ಪೋಡಿ, ಖಾತೆ ಬದಲಾವಣೆ, ನಿವೇಶನ ಕೋರಿದ ಅರ್ಜಿಗಳ ಸಂಖ್ಯೆ ಹೆಚ್ಚಾಗಿತ್ತು. ಸಲ್ಲಿಕೆಯಾದ ಅರ್ಜಿಗಳಿಗೆ ಟೋಕನ್ ವಿತರಿಸಿ ಅಧಿಕಾರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು. ಉಳಿದ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಗಳನ್ನು ವರ್ಗಾಯಿಸಲಾಯಿತು. ಲಾನುಭವಿಗಳಿಗೆ ಮಾಸಾಶನ ಸೇರಿ ವಿವಿಧ ಸೌಲಭ್ಯಗಳ ಪ್ರವಾಣಪತ್ರ ವಿತರಿಸಲಾಯಿತು.

ಲಕ್ಷ ಲಕ್ಷ ಎಲ್ಲಿಂದ ತರಲಿ: ಸರ್.. ನಾನೊಬ್ಬ ರೈತ. ನಾನು ಯಾವ ರಾಜಕೀಯ ಪಕ್ಷದ ಪುಡಾರಿಯಲ್ಲ. ನಮ್ಮ ಪೂರ್ವಿಕರ ಆಸ್ತಿಯನ್ನು 2016ರಲ್ಲೇ ನಾನು ಸತ್ತಿದ್ದೇನೆ ಎಂದು ಅಧಿಕಾರಿಗಳು ಖಾತೆ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಕಚೇರಿಗಳನ್ನು ಸುತ್ತಿ ಹೈರಾಣಾಗಿದ್ದೇನೆ. ಇದುವರೆಗೂ ನ್ಯಾಯ ಸಿಕ್ಕಿಲ್ಲ. ಖಾತೆ ಮಾಡಿಕೊಡಲು ಕಂದಾಯ ನಿರೀಕ್ಷಕ ಲಕ್ಷ ಲಕ್ಷ ಕೇಳುತ್ತಾನೆ ಎಲ್ಲಿಂದ ತರಲಿ. ನೀವೇ ನ್ಯಾಯ ಕೊಡಿಸಬೇಕು ಎಂದು ತಾಲೂಕಿನ ಕರಲಹಳ್ಳಿ ಗ್ರಾಮದ ರೈತ ಸಿದ್ದೇಗೌಡ ಮಾಜಿ ಸಿಎಂ ಎಚ್‌ಡಿಕೆ ಹಾಗೂ ಜಿಲ್ಲಾಧಿಕಾರಿಗಳ ಮುಂದೆಯೇ ಅಳಲು ತೋಡಿಕೊಂಡರು. ರೈತನ ಮನವಿ ಆಲಿಸಿದ ಕುಮಾರಸ್ವಾಮಿ, ಕೂಡಲೇ ಮತ್ತೊಮ್ಮೆ ಸರ್ವೇ ನಡೆಸಿ ಆತನಿಗೆ ನ್ಯಾಯ ದೊರಕಿಸಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರೊಂದಿಗೆ ನಮ್ಮ ಭಾಗದಲ್ಲಿ ನಿರಂತರ ಆನೆ ದಾಳಿ ನಡೆಯುತ್ತಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕೆಲ ರೈತರು ಆಕ್ರೋಶ ವ್ಯಕ್ತಪಡಿಸಿದರು. ಆಶಾ ಕಾರ್ಯಕರ್ತೆಯರು ಸೇರಿ ಹಲವು ಮಂದಿ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net