19 ರಂದು ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

31 CRP 02
??????
Published on

ಚನ್ನರಾಯಪಟ್ಟಣ: ತಾಲೂಕಿನ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ 92ನೇ ರಾಸುಗಳ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ ಸಮುದಾಯ ಭವನದಲ್ಲಿ ಶನಿವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.


ಶಾಸಕ ಸಿ.ಎನ್.ಬಾಲಕೃಷ್ಣರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರ ಸಭೆಯಲ್ಲಿ ರಾಸುಗಳ ಜಾತ್ರೆಯನ್ನು ಜ.9 ರಿಂದ 11 ರವರೆಗೆ ಮತ್ತು ಜ.19 ರಂದು ಬ್ರಹ್ಮರಥೋತ್ಸವ ನಡೆಸಲು ತೀರ್ಮಾನಿಸಲಾಯಿತು.


ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಇದುವರೆಗೆ ಚರ್ಮ ಗಂಟು ರೋಗಕ್ಕೆ 27 ರಾಸುಗಳು ಬಲಿಯಾಗಿವೆ. ಜಾತ್ರೆಗೆ ರಾಜ್ಯದ ವಿವಿಧ ಕಡೆಯಿಂದ ರಾಸುಗಳು ಬರುವುದರಿಂದ ರೋಗ ಉಲ್ಬಣಿಸುತ್ತದೆ. ದನಗಳ ಜಾತ್ರೆ ನಡೆಸುವುದು ಸೂಕ್ತ ಅಲ್ಲ ಎಂದರು.


ಸಭೆಯಲ್ಲಿ ಇದ್ದ ರೈತರು ಇದಕ್ಕೆ ತೀವ್ರ ವಿರೋಧವ್ಯಕ್ತಪಡಿಸಿ, ಜಾತ್ರೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಉತ್ತಮ ಎತ್ತುಗಳನ್ನು ಸಾಕಿದ್ದೇವೆ ಮತ್ತು ಲಸಿಕೆಯನ್ನು ಹಾಕಿಸಲಾಗಿದೆ. ಜಾತ್ರೆಯನ್ನು ನಡೆಸಲೇಬೇಕು ಎಂದು ರೈತರು, ಶಾಸಕರು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು.


ಅಧಿಕಾರಿಗಳು ಮತ್ತು ರೈತರ ಅಭಿಪ್ರಾಯಗಳನ್ನು ಕೇಳಿದ ನಂತರ ಶಾಸಕ ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಇರುವ 1,25,877 ರಾಸುಗಳಿಗೆ ಚುಚ್ಚುಮದ್ದು ಹಾಕಲಾಗಿದೆ. ಆದರೆ, ಹೊರಗಿನಿಂದ ರೋಗ ಇರುವ ಎತ್ತುಗಳು ಬಂದರೆ ಅಪಾಯ ಹೆಚ್ಚು, ರೈತರು ನಷ್ಟ ಅನುಭವಿಸುತ್ತಿರಾ, ಆ ವೇಳೆ ನಮ್ಮನ್ನು ಮತ್ತು ಅಧಿಕಾರಿಗಳನ್ನು ದೂರಬಾರದು ಎಂದರು.


ರೈತರ ಒತ್ತಾಯದ ಮೇರೆಗೆ ಮೂರು ದಿನ ಮಾತ್ರ ರಾಸು ಜಾತ್ರೆ ನಡೆಸಲಾಗುವುದು. ಮತಿಘಟ್ಟ ಮತ್ತು ಬೆಳಗೀಹಳ್ಳಿ ಪಂಚಾಯಿತಿಯವರು ಸಹಕಾರ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಎತ್ತುಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಕೋವಿಡ್ ಮುನ್ನೆಚರಿಕೆಯಾಗಿ ಮೂರನೇ ಡೋಸ್ ಲಸಿಕೆಯನ್ನು ರೈತರು ಪಡೆಯಬೇಕು ಎಂದರು.


ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿವೇಕ್, ನಂದೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಉಪ ತಹಸೀಲ್ದಾರ್ ನಂಜೇಗೌಡ, ಆರ್‌ಐ ವೀರಾಜ್, ಟಿಎಚ್‌ಒ ಡಾ.ಕಿಶೋರ್, ಮುಖಂಡರಾದ ರಾಮಕೃಷ್ಣ, ಜಯರಾಮ್, ಪ್ರಭಾಕರ್, ದೇವಸ್ಥಾನದ ರಂಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net