

ಧಾರವಾಡ: ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಜಿಲ್ಲೆಯ 19 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಶುಕ್ರವಾರ ಸಂಜೆವರೆಗಿನ 24 ಗಂಟೆಯಲ್ಲಿ ಶಂಕಿತ ಕರೊನಾದಿಂದ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆಯಲ್ಲಿ 19 ಏರಿಕೆಯಾಗಿದೆ. ಕರೊನಾ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಿಗಾ ವಹಿಸಿದ್ದವರ ಸಂಖ್ಯೆ 527ರಿಂದ ಶುಕ್ರವಾರ ಸಂಜೆಗೆ 548ಕ್ಕೆ ಏರಿಕೆಯಾಗಿದೆ. ಇದುವರೆಗೆ 86 ಜನರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. 66 ಪ್ರಕರಣ ನೆಗೆಟಿವ್ ಬಂದಿವೆ. ಕರೊನಾ ಪಾಸಿಟಿವ್ ಬಂದಿದ್ದ ನಗರದ ಹೊಸಯಲ್ಲಾಪುರದ ವ್ಯಕ್ತಿ ಗುಣಮುಖನಾಗಿದ್ದಾನೆ ಎನ್ನಲಾಗಿದ್ದು, ಶೀಘ್ರವೇ ಬಿಡುಗಡೆಯಾಗಲಿದ್ದಾನೆ. 84 ಜನರಿಗೆ 14 ದಿನಗಳ ಹೋಂ ಕ್ವಾರೈಂಟೈನ್ ವಿಧಿಸಲಾಗಿದೆ. 16 ಜನರನ್ನು ಆಸ್ಪತ್ರೆಯ ಐಸೋಲೇಶನ್ ವಾರ್ಡ್ನಲ್ಲಿಟ್ಟು ನಿಗಾ ವಹಿಸಲಾಗಿದೆ. 334 ಜನ 14 ದಿನಗಳ ಹಾಗೂ 114 ಜನ 28 ದಿನಗಳ ಐಸೋಲೇಶನ್ ಪೂರ್ಣಗೊಳಿಸಿದ್ದಾರೆ. ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ನಲ್ಲಿ ಜಿಲ್ಲೆಯ 34 ಜನರು ಭಾಗವಹಿಸಿದ್ದರು. ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಪೈಕಿ ಗುರುವಾರ 17 ಜನರ ವರದಿಗಳು ನೆಗೆಟಿವ್ ಬಂದಿವೆ. ಉಳಿದ 17 ಹಾಗೂ ಪ್ರತ್ಯೇಕ ಇಬ್ಬರ ವರದಿಗಳು ಶಿವಮೊಗ್ಗದ ಪ್ರಯೋಗಾಲಯದಿಂದ ಬರಬೇಕಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.