

ದೇವದುರ್ಗ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2020-21ರಿಂದ 2022-23ರವರೆಗೆ ನಡೆದ ಅವ್ಯವಹಾರ ಕೇಸ್ ಸಂಬಂಧ ಸಾಮಾಜಿಕ ಲೆಕ್ಕ ಪರಿಶೋಧನೆ ವರದಿ ಆಧರಿಸಿ 19 ತಾಂತ್ರಿಕ ಹೊರಗುತ್ತಿಗೆ ನೌಕರರ(ಜೆಇ) ವಿರುದ್ಧ ಕ್ರಮಜರುಗಿಸಲಾಗಿದೆ. ಗುತ್ತಿಗೆ ಏಜೆನ್ಸಿಗೆ ಪತ್ರ ಬರೆದ ಜಿಪಂ ಸಿಇಒ ಈಶ್ವರ್ ಕಾಂದೂ, 19ನೌಕರರ ಸೇವೆ ವಾಪಸ್ ಪಡೆಯಲು ಸೂಚಿಸಿದ್ದಾರೆ.
ಅವ್ಯವಹಾರ ಪ್ರಕರಣ ಸಂಬಂಧ ಸಾರ್ವಜನಿಕರು ಹಾಗೂ ಕೆಲ ಶಾಸಕರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಪತ್ರಬರೆದಿದ್ದರು. ಕ್ರಮಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿಗೆ ಸಭಾಪತಿ ಸೂಚಿಸಿದ್ದರು. ತನಿಖೆ ನಡೆಸಲು ಸಾಮಾಜಿಕ ಪರಿಶೋಧನಾ ನಿರ್ದೇಶಕರಿಗೆ, ಇಲಾಖೆ ಆದೇಶ ನೀಡಿತ್ತು. ವಿಶೇಷ ಸಾಮಾಜಿಕ ಪರಿಶೋಧನೆ ತಂಡ, ತಾಲೂಕಿನ ಎಲ್ಲ 33ಗ್ರಾಪಂಗಳಿಗೆ ಭೇಟಿನೀಡಿ ತನಿಖೆ ನಡೆಸಿ ಸುಮಾರು 200ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಮಧ್ಯಂತರ ವರದಿ ನೀಡಿತ್ತು.
ಸದರಿ ವರದಿ ಆಧಾರದಲ್ಲಿ ಅಂದಿನ ತಾಪಂ ಇಒ ಪಂಪಾಪತಿ ಹಿರೇಮಠ, ಎಡಿ ಬಸಣ್ಣ ನಾಯಕ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಇವರು ಸೇರಿ 35 ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು. ಈಗ ಸಮಿತಿ ಅಂತಿಮ ವರದಿಯನ್ನು ನೀಡಿದ್ದು ಪ್ರಕರಣದಲ್ಲಿ 200ಕ್ಕೂ ಹೆಚ್ಚು ಕೋಟಿ ಅವ್ಯವಹಾರ ನಡೆದಿದ್ದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ 33ಗ್ರಾಪಂಯಲ್ಲಿ ಕೆಲಸ ಮಾಡುತ್ತಿದ್ದ 19ತಾಂತ್ರಿಕ ಹೊರಗುತ್ತಿಗೆ ನೌಕರರ ವಿರುದ್ಧ ಈಗ ಜಿಪಂ ಸಿಇಒ ಕ್ರಮಕೈಗೊಂಡಿದ್ದಾರೆ.
ಏಜೆನ್ಸಿ ಬಿಕೆಆರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ಗೆ ಪತ್ರ ಬರೆದು ತಕ್ಷಣ 19ತಾಂತ್ರಿಕ ಹೊರಗುತ್ತಿಗೆ ಸಿಬ್ಬಂದಿ ಸೇವೆ ವಾಪಸ್ ಪಡೆಯಬೇಕು. ತಮ್ಮ ಸಂಸ್ಥೆಯಲ್ಲಿ ಬಾಕಿ ಇರುವ ಮೀಸಲು ಪಟ್ಟಿಯ ಅಭ್ಯರ್ಥಿಗಳನ್ನು ನಿಯಮಾನುಸಾರ ಒದಗಿಸಲು ಪತ್ರದಲ್ಲಿ ಸೂಚಿಸಿದ್ದಾರೆ.
ಯಾರ‌್ಯಾರು ಔಟ್? ತಾಂತ್ರಿಕ ಸಂಯೋಜಕರು, ಸಿವಿಲ್ ತಾಂತ್ರಿಕ ಸಂಯೋಜಕರು, ಕೃಷಿ ತಾಂತ್ರಿಕ ಸಹಾಯಕರು, ಎಂ.ಐ.ಎಸ್. ಸಂಯೋಜಕರ ಸೇವೆ ಕೈಬಿಡಲಾಗಿದೆ. ಪರಿಮಿ ಸಾಗರ, ವಿನೋದ್‌ಕುಮಾರ, ಸುಭಾಷ್, ರವಿಕಿರಣ, ಮಹಮ್ಮದ್ ಇಸಾಕ್, ಗುಡದಪ್ಪ, ಸೋಮಶೇಖರ, ಅನಂತರೆಡ್ಡಿ, ಪುಂಡಲೀಕ ಬಿ.ಟಿ., ಮಹಮ್ಮದ್ ರಿಜ್ವಾನ್, ಮಹಮ್ಮದ್ ಸಮದ್, ಜಿ.ದೀಪಕ್, ಸುರೇಶ ವಾರದ್, ಬಸರೆಡ್ಡಿ, ಶಿವಕುಮಾರ ಸಾನ್‌ಬಾಳ, ರಮೇಶ, ಜಗದೀಶ, ನರಸಪ್ಪ, ಉಮೇಶ ಅವರ ಸೇವೆಯನ್ನು ಕೈಬಿಡಲಾಗಿದೆ. ಎಲ್ಲೆಲ್ಲಿ ಎಷ್ಟು ಅವ್ಯವಹಾರ ? ವಿಶೇಷ ಸಾಮಾಜಿಕ ಪರಿಶೋಧನೆ ತಂಡ ನೀಡಿರುವ ಅಂತಿಮ ತನಿಖೆ ವರದಿಯಲ್ಲಿ ಹಲವು ಅವ್ಯವಹಾರ ಉಲ್ಲೇಖ ಮಾಡಲಾಗಿದೆ. ಕಾಮಗಾರಿ ಅನುಷ್ಠಾನಗೊಳಿಸದೆ 83.09ಲಕ್ಷ ರೂ. ಪಾವತಿ ಮಾಡಲಾಗಿದೆ. ಸಾಮಗ್ರಿ ಖರೀದಿಯಲ್ಲಿ ಕೆಟಿಪಿಪಿ ನಿಯಮ ಪಾಲಿಸಿಲ್ಲ. ಒಂದೇ ವೆಂಡರ್‌ಗೆ ಕೆಟಿಪಿಪಿ ನಿಯಮ ಉಲ್ಲಂಘಿಸಿ 103.35ಕೋಟಿ ರೂ. ಪಾವತಿಸಲಾಗಿದೆ. 3.36ಕೋಟಿ ರೂ. ವೈಯಕ್ತಿಕ ಕಾಮಗಾರಿ ಕೈಗೊಂಡ ಫಲಾನುಭವಿಗಳ ಸಾಮಗ್ರಿ ಮೊತ್ತ ಪಾವತಿಸದೇ ನಿರ್ಲಕ್ಷ್ಯ ಮಾಡಲಾಗಿದೆ. ಅಳತೆ ಪುಸ್ತಕ ದಾಖಲಿಸದೆ 35.22ಕೋಟಿ ರೂ. ಅನುದಾನ ಪಾವತಿಸಲಾಗಿದೆ. ಚೆಕ್ ಮೇಜರ್‌ಮೆಂಟ್ ಮಾಡದೆ 118.77ಕೋಟಿ ರೂ. ಪಾವತಿಸಲಾಗಿದೆ. ಸರ್ಕಾರಕ್ಕೆ ಪಾವತಿಸಬೇಕಾದ 11.2922ಕೋಟಿ ರೂ. ಪಾವತಿಸದೆ ದುರ್ಬಳಕೆ ಮಾಡಲಾಗಿದೆ ಎಂದು ಅಂತಿಮ ತನಿಖೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ಸಾಮಾಜಿಕ ಪರಿಶೋಧನೆ ತಂಡ ಸರ್ಕಾರಕ್ಕೆ ನೀಡಿದ ಅಂತಿಮ ವರದಿ ಆಧರಿಸಿ ಕ್ರಮ ಜರುಗಿಸಲಾಗಿದೆ. 33ಗ್ರಾಪಂಗಳಲ್ಲಿ ನ 19ತಾಂತ್ರಿಕ ಹೊರಗುತ್ತಿಗೆ ಸಿಬ್ಬಂದಿ ಸೇವೆ ವಾಪಸ್ ಪಡೆಯಲು ಏಜೆನ್ಸಿಗೆ ಸೂಚಿಸಲಾಗಿದೆ. ಅವರ ಜಾಗಕ್ಕೆ ಅರ್ಹ ಮೀಸಲು ಅಭ್ಯರ್ಥಿಗಳನ್ನು ಒದಗಿಸಲು ತಿಳಿಸಲಾಗಿದೆ. ಈಶ್ವರ್ ಕಾಂತು ಜಿಪಂ ಸಿಇಒ ರಾಯಚೂರು ದೇವದುರ್ಗದಲ್ಲಿ ಸುಮಾರು 200ಕ್ಕೂ ಹೆಚ್ಚು ಕೋಟಿ ರೂ. ನರೇಗಾ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ತನಿಖೆ ವರದಿ ಆಧರಿಸಿ 35 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಮಾನತುಗೊಂಡವರನ್ನು ಸರ್ಕಾರ ಯಾದಗಿರಿ, ಬೀದರ್ ಜಿಲ್ಲೆಗೆ ನಿಯೋಜಿಸಿದೆ. ಈಗ 19 ಜೆಇಗಳನ್ನು ಕೈಬಿಡಲಾಗಿದೆ. ಅವ್ಯವಹಾರ ಮಾಡಿದ ಅನುದಾನ ವಸೂಲಿ ಮಾಡಿ ಕೆಲಸದಿಂದಲೇ ವಜಾ ಮಾಡಬೇಕು. ಶಿವರಾಜ ನಾಯಕ ಕೊತ್ತದೊಡ್ಡಿ ಅಖಂಡ ದೇವದುರ್ಗ ಹೋರಾಟ ಸಮಿತಿ ಸಂಚಾಲಕ