

ಶಿರಸಿ: ಇದುವರೆಗೂ ಶ್ರಾದ್ಧದ ಮನೆಗಳಿಗೆ, ಊರೊಳಗೆ ಹೊತ್ತು ಕಳೆಯಲು ಸಣ್ಣಪುಟ್ಟದಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟ ಈಗ ತಾಲೂಕಿನಲ್ಲಿ ಬೃಹತ್ ಪ್ರಮಾಣದಲ್ಲಿ ಸಾಗಿದೆ. ಗುರುವಾರ ರಾತ್ರಿ ಇಲ್ಲಿಯ ಹೋಂ ಸ್ಟೇ ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು 19 ಜನರನ್ನು ಬಂಧಿಸಿ, 49.50 ಲಕ್ಷ ರೂ. ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲ್ಲಿಯ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸಾಲ ಗ್ರಾಮದ ವಿಆರ್‌ಆರ್ ಹೋಂ ಸ್ಟೇಯಲ್ಲಿ ಅಂದರ್ ಬಹಾರ್ ಜೂಜಾಟ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾತ್ರಿ 9.45ರ ವೇಳೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಅನೀಲಕುಮಾರ ಜಿ.ಆರ್., ಹಾವೇರಿ ಜಿಲ್ಲೆ ಕನಕಾಪುರದ ಭೀರಪ್ಪ ಫಕೀರಪ್ಪ ಕೇರೆಗೌಡರ, ದಾವಣಗೆರೆ ಶಿವಾಜಿನಗರದ ಬೀರೇಶ ಗೋಣೆಪ್ಪ, ಹಾನಗಲ್ಲ ತಾಲೂಕಿನ ಮಾಸನಹಟ್ಟಿಯ ಶಂಕರಗೌಡ ವಿರುಪಾಕ್ಷ ಗೌಡ ಪಾಟೀಲ್, ಸೊರಬ ತಾಲೂಕಿನ ತಿಮ್ಮಾಪುರದ ನಾಗರಾಜ ಈರಪ್ಪ ರಿತ್ತಿ, ಹಾವೇರಿ ಜಿಲ್ಲೆ ಸಂಗೂರಿನ ಪ್ರದೀಪ ರುದ್ರಪ್ಪ ಅರಿಕೇರೆ, ಶಿಗ್ಗಾಂವಿ ತಾಲೂಕಿನ ಶಡಗರವಳ್ಳಿಯ ಪ್ರಶಾಂತ ರಾಮಣ್ಣ ಹಸನಾಬಾದಿ, ದಾವಣಗೆರೆ ನಿಟ್ಟುವಳ್ಳಿಯ ಜಬಿವುಲ್ಲಾ ಮಾಬೂ ಸಾಬ್, ಬ್ಯಾಡಗಿ ತಾಲೂಕು ಮಲ್ಲೂರಿನ ರೇವಣಸಿದ್ದಯ್ಯ ವೀರಯ್ಯ ಹಿರೇಮಠ, ರಾಣೆಬೆನ್ನೂರು ತಾಲೂಕು ಮೆಡ್ಲೇರಿಯ ಈಶಪ್ಪ ಮಾಲತೇಶಪ್ಪ ಬಡಿಗೇರ, ಇದೇ ತಾಲೂಕಿನ ಅಸುಂಡಿಯ ಪ್ರಕಾಶ ತಂದೆ ಮಲ್ಲಪ್ಪ ಸಿದ್ದಣ್ಣನವರ, ದಾವಣಗೆರೆಯ ಮಲ್ಲಿಕಾರ್ಜುನ ಸೋಮಪ್ಪ, ಹದಡಿ ರಸ್ತೆಯ ಚೇತನ ಎನ್., ಕುರುಬರಕೇರೆಯ ಬಸವರಾಜ ಜಿ.ಆರ್., ಜೋಹಾನಗರದ ಚಮನಸಾಬ್ ಮೇಹಬೂಬ ಸಾಬ್, ಹಾವೇರಿ ಜಿಲ್ಲೆ ಕನಕಾಪುರದ ಬಸವರಾಜ ಮಲ್ಲಪ್ಪ ತಿಪ್ಪಣ್ಣನವರ, ಹಾವೇರಿ ಶಿವಾಜಿನಗರದ ಈರಣ್ಣ ಅಭಿನಂಧನ ದಿನಕರ, ರಾಣೆಬೆನ್ನೂರಿನ ಸಂತೋಷ ಗುಡ್ಡಪ್ಪ ರಾವತನಕಟ್ಟೆ, ಕಂಚಿಗಾರ ಓಣಿಯ ವೀರಬಸಪ್ಪ ಹೊಳೆಬಸಪ್ಪ ಕಾಯಕದ ಬಂಧಿತ ಆರೋಪಿಗಳಾಗಿದ್ದಾರೆ.
ಡಿವೈಎಸ್‌ಪಿ ಗೀತಾ ಪಾಟೀಲ್, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಅಶೋಕ ಆರ್. ರಾಠೋಡ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ ರೇವಣಕರ, ಸಂತೋಷ ಕಮಟಗೇರಿ, ರಾಘವೇಂದ್ರ ಜಿ., ಗಣಪತಿ ಪಟಗಾರ, ಷಣ್ಮುಖ ಮಿರಾಶಿ, ರವಿ ಉಕ್ಕಡಗಾತ್ರಿ, ಭರತಕುಮಾರ, ಮಾರುತಿ ಗೌಡ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಚಟುವಟಿಕೆ !
ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೋಂ ಸ್ಟೇಗಳ ಸಂಖ್ಯೆ ಹೆಚ್ಚಾಗಿದೆ. ಕೆಲ ಹೋಂ ಸ್ಟೇಗಳು ನೋಂದಣಿ ಆಗದಿದ್ದರೂ ಅವುಗಳ ಮಾಹಿತಿ ಮಾತ್ರ ಅಕ್ರಮ ಚಟುವಟಿಕೆಯಲ್ಲಿ ತೊಡಗುವವರಿಗೆ ಲಭ್ಯವಾಗುತ್ತಿದೆ. ಪ್ರಸಕ್ತ ದಾಳಿ ನಡೆದ ರೆಸಾರ್ಟ್ ಹಾವೇರಿಯ ಖ್ಯಾತ ವೈದ್ಯರೊಬ್ಬರದು ಎನ್ನಲಾಗಿದೆ. ಹೀಗಾಗಿ, ಹೊರ ಜಿಲ್ಲೆಯವರೇ ಅಧಿಕ ಸಂಖ್ಯೆಯ್ಲಲಿ ಆಗಮಿಸಿ ಜೂಜಾಟದಲ್ಲಿ ಶಾಮೀಲಾಗಿದ್ದಾರೆ. ಹೊರ ಜಿಲ್ಲೆಯಲ್ಲಿ ಉದ್ಯಮ ನಡೆಸುತ್ತಿರುವವರು, ಉದ್ಯೋಗದಲ್ಲಿ ಹಣ ಗಳಿಸಿದವರು ಜಿಲ್ಲೆಯ ಪ್ರವಾಸಿ ತಾಣಗಳ ಸಮೀಪ, ನಿರ್ಜನ ಪ್ರದೇಶಗಳಲ್ಲಿ ರೆಸಾರ್ಟ್ ನಿರ್ಮಿಸುತ್ತಿರುವುದು ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಪೊಲೀಸ್ ಇಲಾಖೆ ಇನ್ನಷ್ಟು ಚುರುಕಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ರೆಸಾರ್ಟ್‌ಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬೆಳಕಿಗೆ ತರಬೇಕು ಎಂಬ ಆಗ್ರಹ ಸಾರ್ವಜನಿಕರದು.