ಉಡುಪಿಯಲ್ಲಿ 19 ಮಂದಿಯ ಕರೊನಾ ಟೆಸ್ಟ್ ವರದಿ ನೆಗೆಟಿವ್

carona logo
Published on

ಉಡುಪಿ: ಜಿಲ್ಲೆಯಲ್ಲಿ ಶಂಕಿತ ಕರೊನಾ ವೈರಸ್ ಪ್ರಕರಣಕ್ಕೆ ಸಂಬಂಧಿಸಿ 19 ಮಂದಿಯಲ್ಲಿ ಕರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಪ್ರಯೋಗಾಲಯ ವರದಿ ಬಾಕಿ ಇದ್ದ 26 ಮಂದಿಯಲ್ಲಿ 19 ಮಂದಿಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಸೋಮವಾರ ಉಡುಪಿಯಲ್ಲಿ ಕರೊನಾ ವೈರಸ್ ಶಂಕಿತ ಲಕ್ಷಣ ಒಳಗೊಂಡ ನಾಲ್ವರನ್ನು ಐಸೊಲೇಶನ್ ವಾರ್ಡ್‌ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ವಿದೇಶದಿಂದ ಆಗಮಿಸದ, ವಿದೇಶಕ್ಕೆ ಪ್ರಯಾಣ ಮಾಡದವರು ಇವರಾಗಿದ್ದಾರೆ. ಮೂವರು ಉಡುಪಿಯವರಾಗಿದ್ದು, ಒಬ್ಬರು ಜಿಲ್ಲೆಯ ನಿವಾಸಿ ಅಲ್ಲ. 33, 59 ವರ್ಷದ ಇಬ್ಬರು ಪುರುಷರು, 72, 85 ವರ್ಷದ ಇಬ್ಬರು ಮಹಿಳೆಯರು ಐಸೊಲೇಶನ್ ವಾರ್ಡ್‌ಗೆ ದಾಖಲಾದವರು. ಇವರ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಟ್ಟು 11 ಮಂದಿಯ ವರದಿಗೆ ನಿರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 148 ಮಂದಿ ಸ್ವಯಂ ದಿಗ್ಬಂಧನದಲ್ಲಿದ್ದಾರೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಕಡಬ: ಕರೊನಾ ಜಾಗೃತಿ ಮೂಡಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ದೂರಲಾಗಿದೆ. ಕಡಬ ಮೂಲದ ವ್ಯಕ್ತಿಯೋರ್ವರು ವಿದೇಶದಿಂದ ಬಂದು ಸವಣೂರು ರೈಲ್ವೆ ಗೇಟ್ ಸಮೀಪ ಇರುವ ವಸತಿ ಸಮುಚ್ಚಯದಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದಾರೆ ಎಂಬ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಸ್ಥಳಕ್ಕೆ ತೆರಳಿದ್ದರು. ಅವರಿಗೆ ಕರೊನಾ ಜಾಗೃತಿ ಕರಪತ್ರ ನೀಡುತ್ತಿದ್ದ ವೇಳೆ ಅಲ್ಲಿದ್ದ ವ್ಯಕ್ತಿಯೋರ್ವರು, ಮಾಸ್ಕ್ ಹಾಕಿ ನಮ್ಮ ಮನೆ ಬಳಿಗೆ ಯಾಕೆ ಬಂದಿದ್ದಿರಿ ಎಂದು ಗದರಿಸಿದ್ದಾರೆ. ಘಟನೆ ಕುರಿತು ಆರೋಗ್ಯ ಕಾರ್ಯಕರ್ತೆಯರು ವೈದ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವೈದ್ಯಾಧಿಕಾರಿ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಕೋಡಿಮಾರು ವ್ಯಕ್ತಿಗೆ ಸೋಂಕು ವದಂತಿ

ಬೆಳ್ಮಣ್: ಕೋಡಿಮಾರು ಎಂಬಲ್ಲಿನ ವ್ಯಕ್ತಿಯೊಬ್ಬರಿಗೆ ಕರೊನಾ ವೈರಸ್ ಇರುವ ಬಗ್ಗೆ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಿದ್ದವು. ಇದು ಸುಳ್ಳು ಸುದ್ದಿ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ಹರಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ವಿದೇಶದಿಂದ ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಯಾರಿಗೂ ಕರೊನಾ ಸಮಸ್ಯೆ ಇಲ್ಲ ಎಂದಿದ್ದಾರೆ.

ಯುವತಿಗೆ ಜ್ವರ, ಪರೀಕ್ಷಿಸಿದ ಬಳಿಕ ಮನೆಗೆ: ಸುಬ್ರಹ್ಮಣ್ಯ: ಮಹಾರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ, ಊರಿಗೆ ಬಂದಿದ್ದ ಸುಬ್ರಹ್ಮಣ್ಯ ಸಮೀಪದ ಯುವತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಮಂಗಳೂರಿನ ಜಿಲ್ಲಾಸ್ಪತ್ರೆಗೆ ಸೋಮವಾರ ದಾಖಲಿಸಲಾಯಿತು. ಯುವತಿಯಲ್ಲಿ ಕರೊನಾ ಸೋಂಕಿನ ಲಕ್ಷಣ ಕಂಡುಬಾರದ ಹಿನ್ನ್ನೆಲೆಯಲ್ಲಿ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ ಬಳಿಕ ಮುಂಜಾಗ್ರತೆ ಕ್ರಮವಾಗಿ ಮಂಗಳೂರಿಗೆ ಕಳುಹಿಸಲಾಗಿತ್ತು. ಮನೆಯಿಂದ ಹೊರಬಾರದೆ, ಸಾರ್ವಜನಿಕವಾಗಿ ತಿರುಗಾಡದಂತೆ ಯುವತಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳ್ತಂಗಡಿಯ 82 ಮಂದಿ ಮೇಲೆ ನಿಗಾ: 

ಬೆಳ್ತಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 82 ಮಂದಿ ಹೋಮ್ ಕ್ವಾರೆಂಟೈನ್‌ನಲ್ಲಿದ್ದಾರೆ. ಇದರಲ್ಲಿ 80 ಜನರನ್ನು ಪೊಲೀಸ್ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರ ಸಮಕ್ಷಮ ತಪಾಸಣೆ ಮಾಡಿದ್ದು, ಅವರನ್ನು ಮನೆಯಿಂದ ಹೊರಗೆ ಬಾರದಂತೆ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಎಚ್ಚರಿಕೆ ನೀಡಲಾಗಿದೆ. ಪಕ್ಕದ ಮನೆಯವರಿಗೂ ನೊಟೀಸ್ ಜಾರಿ ಮಾಡಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗಳು ಹೊರಗಡೆ ಹೋದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net