

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗ ಜ.19 ಮತ್ತು 25ರಂದು ವಿವಿಧ ಇಲಾಖೆಗಳ ಗ್ರೂಪ್ ಬಿ ಉಳಿಕೆ ಮೂಲ ವೃಂದ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಪರೀಕ್ಷಾ ಮಾರ್ಗಸೂಚಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪರೀಕ್ಷಾ ಅಕ್ರಮಗಳ ತಡೆಗೆ ರೂಪಿಸಿರುವ ಮಾರ್ಗಸೂಚಿಗಳು ಪ್ರವೇಶ ಪತ್ರದಲ್ಲಿದ್ದು, ಓದಿ ಅಭ್ಯರ್ಥಿಗಳು ತಪ್ಪದೆ ಪಾಲಿಸಬೇಕು. ಪ್ರವೇಶ ಪತ್ರವನ್ನು, ಭಾವ ಚಿತ್ರವಿರುವ ವೋಟರ್‌ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್‌ಕಾರ್ಡ್, ಪಾಸ್‌ಪೋರ್ಟ್, ಸರ್ಕಾರಿ ನೌಕರರ ಮೂಲ ಗುರುತಿನ ಚೀಟಿ ಪರಿಶೀಲಿಸಿದ ನಂತರವೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುವುದು.
ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಕೊಠಡಿಯೊಳಗೆ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ, ವೈಟ್‌ಫ್ಲೂಯಿಡ್, ಪೇಪರ್, ಬುಕ್ ಇತ್ಯಾದಿಗಳನ್ನು ಒಯ್ಯುವಂತಿಲ್ಲ.
ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್ ಧರಿಸುವಂತಿಲ್ಲ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಆಭರಣಗಳು, ಪುಲ್‌ವೋವರ್ಸ್, ಜಾಕೆಟ್ ಮತ್ತು ಸ್ವೆಟರ್ ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ.
ಕಿವಿ, ಬಾಯಿ ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್‌ಮಾಸ್ಕ್ ಧರಿಸುವಂತಿಲ್ಲ. ಮೆಟಲ್‌ವಾಟರ್ ಬಾಟೆಲ್ ಅಥವಾ ಪಾರದರ್ಶಕವಲ್ಲದ ನೀರಿನ ಬಾಟಲಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಒಯ್ಯದಂತೆ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮೆಟಲ್‌ಡಿಟೆಕ್ಟರ್, ಎಲ್‌ಇಡಿ ಬ್ಯಾಟರಿ ಬಳಸಿ ಅಭ್ಯರ್ಥಿಗಳನ್ನು ತಪಾಸಣೆ ನಡೆಸಲಾಗುವುದು. ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿ ಪ್ರತ್ಯೇಕ ತಪಾಸಣೆ ನಡೆಸಲಿದ್ದಾರೆ. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಆಧುನಿಕ ಸಂವಹನ ಉಪಕರಣಗಳ ಬಳಕೆ ನಿಯಂತ್ರಣಕ್ಕೆ ಜಾಮರ್, ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಇದರೊಂದಿಗೆ ಫೇಸ್ ರೆಕಗ್ನೈಸೇಷನ್ ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಆಯೋಗದ ಸಿಬ್ಬಂದಿ ಕೈಗೊಳ್ಳುವರು. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಆರೋಗ್ಯ ತಪಾಸಣೆ ಕೌಂಟರ್ ಸ್ಥಾಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
19ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 11.30ರವರೆಗೆ ಪತ್ರಿಕೆ-1 ಹಾಗೂ ಜ.25 ರಂದು ಮಧ್ಯಾಹ್ನ 3ರಿಂದ ಸಂಜೆ 5 ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ ತಿಳಿಸಿದರು. ನಗರದಲ್ಲಿ 21 ಪರೀಕ್ಷಾ ಕೇಂದ್ರಗಳಿದ್ದು,7783 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಂಗವಿಕಲ ಅಭ್ಯರ್ಥಿಗಳ ನೆರವಿಗೆ ವ್ಹೀಲ್‌ಚೇರ್ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು. ಡಿಎಚ್‌ಒ ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಖಜಾನಾಧಿಕಾರಿ ರಮೇಶ್‌ಅರೆಮಲ್ಲಾಪುರ ಇತರರು ಇದ್ದರು.