

ಪಾಂಡವಪುರ: ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆಯಿಂದ ಪರಿಸರ ಸಂರಕ್ಷಣೆ ಅಂಗವಾಗಿ ಸೆ.18ರಂದು ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ಪಿಎಸ್‌ಎಸ್‌ಕೆ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ನಾಟಿ ಕೋಳಿ ಸಾರು, ರಾಗಿಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ನಿರಂಜನ್ ಹೇಳಿದರು.
ಸಸಿ ನೆಡುವ ಕಾರ್ಯಕ್ರಮವನ್ನು ಸಚಿವ ಕೆ.ಸಿ.ನಾರಾಯಣಗೌಡ ಉದ್ಘಾಟಿಸಲಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘಟನೆಯ ಸಂಸ್ಥಾಪನಾ ಅಧ್ಯಕ್ಷ ಎಚ್.ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಶಾಸಕ ಸಾ.ರಾ.ಮಹೇಶ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ಡಾ.ಇಂದ್ರೇಶ್, ಲಕ್ಷ್ಮೀ ಅಶ್ವಿನ್‌ಗೌಡ ಭಾಗವಹಿಸುವರು. ಮಧ್ಯಾಹ್ನದ ರಾಗಿಮುದ್ದೆ ತಿನ್ನುವ ಸ್ಪರ್ಧೆಯ ಅಧ್ಯಕ್ಷತೆಯನ್ನು ಸಂಘಟನೆ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳೆಯರು ಮತ್ತು ಪುರುಷರಿಗೆ ಪ್ರತೇಕವಾಗಿ ರಾಗಿಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದ್ದು, ಮುದ್ದೆಯನ್ನು 250 ಗ್ರಾಂ ನಂತೆ ತೂಕ ಮಾಡಿ ಬಡಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು 200 ರೂ. ಪ್ರವೇಶ ಶುಲ್ಕವನ್ನು ಪಾವತಿಸಿಬೇಕು. ನಾಲ್ವರು ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಮೊದಲನೇ ಬಹುಮಾನ ಟಗರು, ಎರಡನೇ ಬಹುಮಾನ ಹೋತ, ಮೂರನೇ ಬಹುಮಾನ 5 ನಾಟಿಕೋಳಿ ಹಾಗೂ ಸಮಾಧಾನಕರ ಬಹುಮಾನವಾಗಿ ಎರಡು ನಾಟಿ ಕೋಳಿ ವಿತರಿಸಲಾಗುವುದು ಎಂದು ಹೇಳಿದರು. ಸಂಘಟನೆ ತಾಲೂಕು ಅಧ್ಯಕ್ಷ ಕೆ.ಎಸ್.ರೇವಣ್ಣ, ಉಪಾಧ್ಯಕ್ಷ ಹಾರೋಹಳ್ಳಿ ಸುರೇಶ್(ಪೈಲ್ವಾನ್), ಅರಳಕುಪ್ಪೆ ಸಿದ್ದರಾಮು ಇದ್ದರು.