ಹೆದ್ದಸೆ ಲೋಕನಾಥಪುರ ರಸ್ತೆಯಲ್ಲಿ ಗಡಿಶಾಸನ ಪತ್ತೆ

web 1
Published on

ಕೊಪ್ಪ: ಜಯಪುರದ ಹೆದ್ದಸೆ ಗ್ರಾಮದ ಸಮೀಪ ದೇವನಾಗರಿ ಲಿಪಿಯ ಸಂಸ್ಕೃತ ಭಾಷೆಯಲ್ಲಿರುವ 18ನೇ ಶತಮಾನದ ಗಡಿಶಾಸನ ಪತ್ತೆಯಾಗಿದೆ ಎಂದು ಇತಿಹಾಸ ಮತ್ತು ಪ್ರಾಕ್ತನ ಸಂಶೋಧಕ ನ.ಸುರೇಶ ಕಲ್ಕೆರೆ ತಿಳಿಸಿದ್ದಾರೆ.

ರಜತ್ ಕುಮಾರ್ ನುಗ್ಗಿ ಮತ್ತು ಸುಹಾರ್ದನ್ ಗೌಡ ಲೋಕನಾಥಪುರ ಅವರು ಪತ್ತೆ ಮಾಡಿರುವ ಈ ಗಡಿಶಾಸನ 93 ಸೆ.ಮೀ ಎತ್ತರ ಮತ್ತು 30 ಸೆ.ಮೀ ಅಗಲವಾಗಿದೆ. ಶಾಸನದ ಮೇಲ್ಭಾಗ ಸೂರ್ಯಚಂದ್ರರ ಕೆತ್ತನೆಯಿದೆ. ಅದರ ಕೆಳಭಾಗ ಶ್ರೀ ಕೃಷ್ಣರಾಜ ಒಡೆಯರ್ ಎಂದು ದೇವನಾಗರಿ ಲಿಪಿಯಲ್ಲಿ ಕೆತ್ತನೆಯಿದೆ. ಅದರ ಕೆಳಭಾಗದಲ್ಲಿ ಬಲಗೈಯಲ್ಲಿ ಕಮಂಡಲ, ಎಡಗೈಯಲ್ಲಿ ಛತ್ರಿ ಹಿಡಿದಿರುವ ವಾಮನಮೂರ್ತಿಯ ಉಬ್ಬು ಶಿಲ್ಪದ ಕೆತ್ತನೆಯನ್ನು ಕಾಣಬಹುದಾಗಿದೆ.

ಹೆದ್ದಸೆಯಲ್ಲಿ ಶಿವ ಪಂಚಾಯತನ ದೇವಾಲಯವಿದೆ. ಇದರಲ್ಲಿ ಉಮಾಮಹೇಶ್ವರ ಪ್ರಧಾನ ದೇವರಾಗಿದ್ದು. ಅದರ ಅಕ್ಕಪಕ್ಕ ದುರ್ಗಾಬ, ಗೋಪಾಲಕೃಷ್ಣ, ಗಣಪತಿ, ಸೂರ್ಯನಾರಾಯಣ ದೇವರನ್ನು ಪ್ರತಿಷ್ಟಾಪಿಸಲಾಗಿದೆ. ಹೆದ್ಸೆ ತಿಮ್ಮಯ್ಯ ಎಂಬುವರು ಈ ಶಿಲಾಮಯ ದೇವಾಲಯವನ್ನು ನಿರ್ವಿುಸಿದ್ದಾರೆ. ಅವರ ಕೋರಿಕೆ ಮೇರೆಗೆ ದೇವಾಲಯಕ್ಕೆ ಕ್ರಿ.ಶ.1809ರಲ್ಲಿ ಮೈಸೂರಿನ ಮಹಾರಾಜಶ್ರೀ ಕೃಷ್ಣರಾಜ ಒಡೆಯರ್ ಜಮೀನನ್ನು ದತ್ತಿ ನೀಡಿದ್ದಾರೆ. ಹೀಗೆ ದತ್ತಿ ನೀಡಿದ ಜಮೀನಿನ ಸ್ಥಳದ ಗಡಿ ಗುರುತಿಗಾಗಿ ಒಂದು ಸಾಲಿನ ಶಾಸನಯುಕ್ತ ಗಡಿಕಲ್ಲನ್ನು ನಿಲ್ಲಿಸಲಾಗಿದೆ. ಇಂದು ಪತ್ತೆಯಾಗಿರುವ ಶಾಸನ ದೇವಾಲಯಕ್ಕೆ ಸಂಬಂಧಿಸಿದೆ ಎಂದು ನ.ಸುರೇಶ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net