187 ಕೋಟಿ ರೂ. ದುರ್ಬಳಕೆ: ವಾಲ್ಮೀಕಿ ಜಯಂತಿ ಬಹಿಷ್ಕರಿಸಲು ನಿರ್ಧಾರ

Valmiki Sangha
Published on

ಹಿರೇಕೆರೂರ: ಪಟ್ಟಣದಲ್ಲಿ ಅ. 17ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಲು ತಾಲೂಕಿನ ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ತಹಸೀಲ್ದಾರ್ ಎಚ್. ಪ್ರಭಾಕರಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಮಾಜದವರು, ರಾಜ್ಯದ ವಾಲ್ಮೀಕಿ ಜನಾಂಗದ ಕಾರ್ಯಗಳಿಗೆ ಬಳಸಲು ಮೀಸಲಿರಿಸಿದ್ದ 187 ಕೋಟಿ ರೂಪಾಯಿಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡು, ಸಮಾಜದ ಹಿತ ಕಡೆಗಣಿಸಿದೆ. ವಿವಿಧ ಇಲಾಖೆಗಳ ಮುಖಾಂತರ ನಮ್ಮ ಸಮಾಜದವರಿಗೆ ದೊರೆಯಬೇಕಿದ್ದ ಸರ್ಕಾರದ ಆರ್ಥಿಕ ಸೌಲಭ್ಯಗಳು ಕುಂಠಿತಗೊಂಡಿವೆ. ಎಸ್​ಟಿ ಸಮುದಾಯದ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರ್ವಿುಕರಿಗೆ, ಮಹಿಳೆಯರಿಗೆ ಸಿಗಬೇಕಿದ್ದ ವಿವಿಧ ಅನುಕೂಲಗಳು 2 ವರ್ಷದಿಂದ ದೊರಕಿಲ್ಲ. ಹೀಗಾಗಿ, ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸದಿರಲು ತೀಮಾನಿಸಿದ್ದೇವೆ ಎಂದರು.

ರಾಜ್ಯ ಸರ್ಕಾರ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಲು ಉದ್ದೇಶಿಸಿರುವ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ನಡೆಯಬೇಕು. ಅ. 16ರೊಳಗಾಗಿ 500 ಕೋಟಿ ರೂಪಾಯಿಗಳನ್ನು ವಾಲ್ಮೀಕಿ ನಿಗಮಕ್ಕೆ ಮಂಜೂರು ಮಾಡಿ, ವಿವಿಧ ಯೋಜನೆ ಸೌಲಭ್ಯ ಕಲ್ಪಿಸಿದರೆ ನಮ್ಮ ಸಮಾಜ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸುತ್ತದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಜಯಂತಿ ನಂತರ ಸರ್ಕಾರದ ವಿರುದ್ಧ ಬೀದಿಗಳಿದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋವಿಂದಪ್ಪ ತಳವಾರ, ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ, ಕೆ.ಡಿ.ದಿವಿಗೀಹಳ್ಳಿ, ಹುಚ್ಚಪ್ಪ ಗೊಣೇರ, ಆರ್.ಎಫ್. ಹುಲ್ಲತ್ತಿ, ಎಲ್.ಬಿ. ನಾಯ್ಕರ, ವಿ.ಎಚ್. ಮಾಸೂರ, ಜಿ.ಎಚ್. ಅಗಸಿಬಾಗಿಲ, ರಮೇಶ ಮಾಳಮ್ಮನವರ, ಮಂಜುನಾಥ ಶಿವನಕ್ಕನವರ, ಮಂಜು ದೊಡ್ಡತಳವಾರ, ಆಂಜನೇಯ ಗುತ್ತಲ, ಪ್ರವೀಣ ತಳವಾರ, ಮಲ್ಲೇಶ ತಳವಾರ, ಬಿ.ಬಿ. ಯಲ್ಲಕ್ಕನವರ, ಮಹೇಶ ದೊಡ್ಮನಿ, ಗದಿಗೆಪ್ಪ ಮಾರವಳ್ಳಿ, ದುರ್ಗಪ್ಪ ತಳವಾರ, ಶಿವಾನಂದ ಹಾಲಸಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net