

ಮಂಗಳೂರು: ಕರಾವಳಿಯಲ್ಲಿ ಕರೊನಾ ಸೋಂಕು ವ್ಯಾಪಕವಾಗುತ್ತಿದೆ. ಪ್ರಾಥಮಿಕ ಸಂಪರ್ಕದಿಂದ ಜನರು ಸೋಂಕಿಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ದ.ಕ.ದಲ್ಲಿ ಶನಿವಾರ 186 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 37 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕಿತರಾದರೆ, ಉಡುಪಿಯಲ್ಲಿ ಕಾಣಿಸಿಕೊಂಡ 90ರಲ್ಲಿ 75 ಮಂದಿಯೂ ಅದೇ ರೀತಿಯಲ್ಲಿ ಸೋಂಕಿಗೆ ಒಳಗಾದವರು.
ದ.ಕ.ದಲ್ಲಿ ಶನಿವಾರ ವರದಿಯಾಗಿರುವ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 37 ಮಂದಿಗೆ ಸೋಂಕು ತಗಲಿದೆ. ಇನ್‌ಫ್ಲುಯೆಂಜಾ ಲೈಕ್ ಇಲ್‌ನೆಸ್ ಇದ್ದ 64 ಮಂದಿಯ ಸ್ಯಾಂಪಲ್‌ನಲ್ಲಿ ಪ್ರಕರಣ ದೃಢಪಟ್ಟಿದ್ದರೆ, ತೀವ್ರ ಉಸಿರಾಟ ತೊಂದರೆ ಇದ್ದ 17 ಮಂದಿಗೆ, ಬೆಂಗಳೂರಿನಿಂದ ಮರಳಿದ ಇಬ್ಬರಿಗೆ ಸೋಂಕು ತಗಲಿದೆ. ಕತಾರ್, ದುಬೈಗಳಿಂದ ಹಿಂದಿರುಗಿದ 10 ಮಂದಿ, ಶಸ್ತ್ರಕ್ರಿಯೆಗೆ ಮುನ್ನ ನಡೆಸಲಾದ ಕೋವಿಡ್ ಟೆಸ್ಟ್‌ನಲ್ಲಿ 7 ಮಂದಿಗೆ ಪಾಸಿಟಿವ್ ಇರುವುದು ಗೊತ್ತಾಗಿದೆ. 32 ಮಂದಿಯ ಸಂಪರ್ಕ ಶೋಧಿಸಲಾಗುತ್ತಿದೆ. ರ‌್ಯಾಂಡಮ್ ಸ್ಯಾಂಪ್ಲಿಂಗ್‌ನಲ್ಲಿ 13 ಮಂದಿಗೆ ಸೋಂಕು ಸಿಕ್ಕಿದೆ. ನಾಲ್ವರು ಗರ್ಭಿಣಿಯರಲ್ಲಿ ಹೆರಿಗೆ ಪೂರ್ವ ಪರೀಕ್ಷೆಯಲ್ಲೂ ಸೋಂಕಿರುವುದು ತಿಳಿದುಬಂದಿದೆ. ಒಟ್ಟು 29 ಮಂದಿ ಗುಣವಾಗಿ ಮನೆಗಳಿಗೆ ಮರಳಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 2,034 ಆಗಿದ್ದರೆ, ಸಕ್ರಿಯ ಪ್ರಕರಣಗಳು 1,211. ಇದುವರೆಗೆ 782 ಮಂದಿ ಚಿಕಿತ್ಸೆ ಯಶಸ್ವಿಯಾಗಿ ಮನೆಯಲ್ಲಿದ್ದಾರೆ.
ಕಾಸರಗೋಡಿನಲ್ಲಿ ಶೂನ್ಯ ಪ್ರಕರಣ: ಕಾಸರಗೋಡಿನಲ್ಲಿ ಶನಿವಾರ ಕರೊನಾ ಪ್ರಕರಣ ದಾಖಲಾಗಿಲ್ಲ. ಕೇರಳ ರಾಜ್ಯದಲ್ಲಿ ಶನಿವಾರ 488 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮೂವರು ಬಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸರಣಿ ಮುಂದುವರಿದಿದೆ. ಶನಿವಾರ ಮೂವರು ಮೃತರಾಗಿದ್ದಾರೆ. ತೀವ್ರ ಸ್ವರೂಪದ ರಕ್ತದ ಕ್ಯಾನ್ಸರ್ ಹೊಂದಿದ್ದ 33 ವರ್ಷದ ಗಂಡಸು, ನ್ಯೂಮೋನಿಯಾ, ಹೃದಯದ ಕಾಯಿಲೆ, ಹೈಪರ್‌ಟೆನ್ಶನ್ ಇದ್ದ 67 ವರ್ಷದ ವೃದ್ಧೆ ಹಾಗೂ ಡಯಾಬಿಟಿಸ್, ಉಸಿರಾಟದ ಕಾಯಿಲೆ ಇದ್ದ 78 ವರ್ಷದ ವೃದ್ಧ ಮೃತರು.