ಜನಾಶೀರ್ವಾದದಿಂದ ಬಿಜೆಪಿ ಸರ್ಕಾರ ರಚಿಸಿಲ್ಲ

R B Thimmapura
Published on

ಚಿತ್ರದುರ್ಗ: ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯವರಿಗೆ ಯಾವತ್ತೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಮೂರು ಬಾರಿ ಆಡಳಿತ ನಡೆಸಿದ್ದು, ಕೆಲ ನಾಯಕರು ಮುಖ್ಯಮಂತ್ರಿಯಾಗಿದ್ದು, ಜನಾಶೀರ್ವಾದದಿಂದ ಅಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ಖರೀದಿ, ಅಡ್ಡದಾರಿ ಹೀಗೆ.. ಅಸಹ್ಯ ಪಡುವಂತಹ ಅವರ ನಡವಳಿಕೆಗಳಿಂದ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ್ದಾರೆ ಹೊರತು ನಾಡಿನ ಜನತೆ ಅವರಿಗೆ ಯಾವತ್ತೂ ಅಧಿಕಾರ ಕೊಟ್ಟಿಲ್ಲ. ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುವುದು ಅವರ ಚಾಳಿ ಎಂದು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ದಲಿತ ಸಿಎಂ ಕುರಿತ ಯಾವುದೇ ಪ್ರಸ್ತಾಪವಿಲ್ಲ, ಶಾಸಕರಲ್ಲಿ ಭಿನ್ನಾಭಿಪ್ರಾಯವಿಲ್ಲ. ಪಕ್ಷದೊಳಗಿನ ಸಚಿವರು, ಶಾಸಕರು ಸಭೆ ನಡೆಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಏನೇ ತೀರ್ಮಾನ ಕೈಗೊಂಡರು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾಯಕರು ಮನೆಗೆ ಊಟಕ್ಕೆ, ಚಹಾಕ್ಕೆ ಹೋದರೆ, ಅದು ಭಿನ್ನಮತ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ನಿಗಮ ಮಂಡಳಿಗಳಿಗೆ ನಿಷ್ಠಾವಂತರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net