

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಾಣಂತಿ ಸಹಿತ ಇಬ್ಬರು ಕರೊನಾಕ್ಕೆ ಬಲಿಯಾಗಿದ್ದು, ಒಂದೇ ದಿನ 183 ಮಂದಿಗೆ ಕರೊನಾ ಸೋಂಕು ತಗಲಿದೆ. ಇದು ಒಂದೇ ದಿನ ಬಂದಿರುವ ಕೋವಿಡ್ ಪ್ರಕರಣಗಳಲ್ಲಿ ಅತ್ಯಧಿಕ ಸಂಖ್ಯೆ.
ಪುತ್ತೂರು ನಿವಾಸಿ 32 ವರ್ಷದ ಬಾಣಂತಿ ಮಧುಮೇಹ, ಮೂತ್ರಜನಕಾಂಗದ ಸೋಂಕಿನಿಂದ ಬಳಲುತ್ತಿದ್ದರು. 10 ದಿನದ ಹಿಂದೆಯಷ್ಟೇ ಜನ್ಮ ನೀಡಿದ ಮಗುವಿಗೂ ಕೋವಿಡ್ ಸೋಂಕು ತಗುಲಿದೆ. ಮಹಿಳೆಯನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಅವರು ಮೃತರಾಗಿದ್ದಾರೆ.
ಮಂಗಳೂರು ನಿವಾಸಿ 57 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತರಾಗಿದ್ದಾರೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
54 ಮಂದಿ ಮೂಲ ಪತ್ತೆಯಿಲ್ಲ: ಜಿಲ್ಲೆಯಲ್ಲಿ ಬುಧವಾರದ ವರದಿಯಂತೆ ಒಟ್ಟು 183 ಮಂದಿಗೆ ಕರೊನಾ ಸೋಂಕು ತಗಲಿದೆ. ಪ್ರಾಥಮಿಕ ಸಂಪರ್ಕದಿಂದ 63, ಐಎಲ್‌ಐ(ಇನ್‌ಫ್ಲುಯೆಂಜಾ ಲೈಕ್ ಇಲ್‌ನೆಸ್) ಲಕ್ಷಣದ 25 ಮಂದಿಗೆ ಸೋಂಕು ದೃಢಪಟ್ಟಿದೆ. ತೀವ್ರ ಉಸಿರಾಟದ ತೊಂದರೆಯ 4, ದ್ವಿತೀಯ ಸಂಪರ್ಕದ 2, ಗಲ್ಫ್ ರಾಷ್ಟ್ರದಿಂದ ಹಿಂದಿರುಗಿದ ಐವರು, ಬೆಂಗಳೂರಿನಿಂದ ಮರಳಿದ ಒಬ್ಬರು, ಮಹಾರಾಷ್ಟ್ರದಿಂದ ಮರಳಿದ ಇಬ್ಬರು, ಸರ್ಜರಿ ಪೂರ್ವ ಸ್ಯಾಂಪ್ಲಿಂಗ್‌ನಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ.
54 ಮಂದಿಗೆ ಯಾವ ಮೂಲದಿಂದ ಕರೊನಾ ಸೋಂಕು ತಗುಲಿದೆ ಎಂಬ ಬಗ್ಗೆ ಇನ್ನೂ ಶೋಧ ನಡೆಯುತ್ತಿದೆ. ಐಸಿಯುನಲ್ಲಿ ಪ್ರಸ್ತುತ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿಯನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1542ಕ್ಕೆ ಏರಿಕೆಯಾಗಿದ್ದು ಸಕ್ರಿಯ ಪ್ರಕರಣಗಳು 819.
ಕಾರ್ಪೊರೇಟರ್‌ಗೆ ಪಾಸಿಟಿವ್: ಮಂಗಳೂರು ಮಹಾನಗರಪಾಲಿಕೆಯ ವಾರ್ಡೊಂದರ ಕಾರ್ಪೊರೇಟರ್‌ಗೆ ಕರೊನಾ ದೃಢಪಟ್ಟಿದೆ. ಅವರು ಪತಿ ಹಾಗೂ ಮೂವರು ಮಕ್ಕಳೊಂದಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳು ಹಾಗೂ ಪತಿ ಜ್ವರದಿಂದ ಬಳಲುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿತಿ ಸಾಮಾನ್ಯ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ. ಶಾಸಕ ಯು.ಟಿ.ಖಾದರ್ ಅವರ ಜತೆ ಎಸ್ಕಾರ್ಟ್ ವಾಹನದಲ್ಲಿರುವ ಡಿಎಆರ್ ಪೊಲೀಸ್ ಸಿಬ್ಬಂದಿಗೂ ಕರೊನಾ ಸೋಂಕು ತಗಲಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ, ಸಿಸಿಬಿ ಪೊಲೀಸ್ ವಿಭಾಗದ ಒಬ್ಬರು ಸಿಬ್ಬಂದಿಗೆ ಕರೊನಾ ದೃಢಪಟ್ಟಿದೆ.
ಭಟ್ಕಳದ ವ್ಯಕ್ತಿ ಸಾವು
ಭಟ್ಕಳದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಹೃದಯ ಕಾಯಿಲೆ, ಉಸಿರಾಟ ಸಮಸ್ಯೆಯೊಂದಿಗೆ ಬಂದಿದ್ದ 62ರ ವೃದ್ಧರೊಬ್ಬರು ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದೆ. ಆದರೆ ಅವರು ಹೊರಜಿಲ್ಲೆಯವರು ಎನ್ನುವ ಕಾರಣಕ್ಕೆ ಅವರನ್ನು ದ.ಕ ಜಿಲ್ಲೆಯ ಸಾವಿನ ಪಟ್ಟಿಗೆ ಸೇರಿಸಿಲ್ಲ.
ಕಾಸರಗೋಡಿನ 4 ಜನರಿಗೆ ದೃಢ
ಕಾಸರಗೋಡು: ಜಿಲ್ಲೆಯ ನಾಲ್ಕು ಮಂದಿ ಸಹಿತ ಕೇರಳದಲ್ಲಿ ಬುಧವಾರ 301 ಮಂದಿಯಲ್ಲಿ ಕೋವಿಡ್- 19 ಪತ್ತೆಯಾಗಿದೆ. ಇವರಲ್ಲಿ 99 ಮಂದಿ ವಿದೇಶದಿಂದ, 95 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದರೆ, ಇತರ 90 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಸುಳ್ಯ, ಕಡಬ ತಾಲೂಕುಗಳಿಗೆ 1 ಕೋಟಿ ರೂ. ಮಂಜೂರು
ಕಡಬ: ಸುಳ್ಯ ಹಾಗೂ ಕಡಬ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ಮತ್ತು ಅಗತ್ಯ ಪರಿಕರ ಅಳವಡಿಸಲು ರಾಜ್ಯ ಸರ್ಕಾರ 1.03 ಕೋಟಿ ರೂ.ಮಂಜೂರು ಮಾಡಿದೆ ಎಂದು ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ. ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ 50 ಬೆಡ್‌ಗಳಿಗೆ ಹೈಪ್ರೊ ಆಕ್ಷಿಜನ್, ಏರ್ ಮತ್ತು ವ್ಯಾಕ್ಯೂಮ್ ಪಾಯಿಂಟ್ ಅಳವಡಿಸಲು 66 ಲಕ್ಷ ರೂ. ಹಾಗೂ ಕಡಬ ಸಮುದಾಯ ಆಸ್ಪತ್ರೆಯ 30 ಬೆಡ್‌ಗಳಿಗೆ ಹೈಪ್ರೊ ಆಕ್ಷಿಜನ್, ಏರ್ ಮತ್ತು ವ್ಯಾಕ್ಯೂಮ್ ಪಾಯಿಂಟ್ ಅಳವಡಿಸಲು 48 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ. ತಕ್ಷಣ ಆಸ್ಪತ್ರೆಗಳಿಗೆ ನಿಗದಿತ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.