1800 ಕಾರ್ಮಿಕರಿಗೆ ಪಾವತಿಯಾಗದ ನರೇಗಾ ಕೂಲಿ

Mudgal Narega Labers
ನಾಗಲಾಪುರ ಗ್ರಾಪಂ ಕಚೇರಿ ಮುಂದೆ ಕೂಲಿಕಾರರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
Published on

ಮುದಗಲ್: ಸಮೀಪದ ನಾಗಲಾಪುರ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಿದ 1800 ಕಾರ್ಮಿಕರಿಗೆ ಕೂಲಿ ಪಾವತಿ ಮಾಡದ್ದನ್ನು ವಿರೋಧಿಸಿ ಪಂಚಾಯಿತಿ ಕಚೇರಿ ಮುಂದೆ ಕೂಲಿಕಾರರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಪಂಚಾಯಿತಿ ವ್ಯಾಪ್ತಿಯ ವ್ಯಾಕರನಾಳ, ನಾಗಲಾಪುರ, ಹೆಗ್ಗಾಪುರ ಸೇರಿದಂತೆ ವಿವಿಧ ಗ್ರಾಮದ 1800 ಕೂಲಿ ಕಾರ್ಮಿಕರಿಗೆ 62 ಲಕ್ಷ ರೂ. ಕೂಲಿ ಪಾವತಿಸಬೇಕಿದೆ. ಈ ಹಿಂದೆ ಪ್ರತಿಭಟನೆ ನಡೆಸಿದಾಗ ತಾಪಂ ಇಒ ಸ್ಥಳಕ್ಕೆ ಆಗಮಿಸಿ ಆದಷ್ಟು ಬೇಗ ಕೂಲಿ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.

ಆದರೆ, ಈವರೆಗೆ ಪಾವತಿ ಆಗಿಲ್ಲ. ಕೂಲಿ ಹಣ ಪಾವತಿಸಲು ಗ್ರಾಪಂ ಅಧ್ಯಕ್ಷರು ಕಾರ್ಮಿಕರಿಂದ ಹಣದ ಬೇಡಿಕೆ ಇಟ್ಟಿರುವುದು ಹಾಗೂ ನಕಲಿ ಕೂಲಿ ಕಾರ್ಮಿಕರ ಕುರಿತು ಪರಿಶೀಲನೆಗೆ ದೂರು ನೀಡಿರುವುದರಿಂದ ಕೂಲಿ ಪಾವತಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಧರಣಿನಿರತರು, ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

ಕೂಲಿ ಕಾರ್ಮಿಕರಾದ ಹನುಮಂತ ಛಲವಾದಿ, ಬೀರಪ್ಪ ಪೂಜಾರಿ, ಛತ್ರಪ್ಪ ನಾಗಲಾಪುರ, ವೀರೇಶ ವ್ಯಾಕರನಾಳ, ಹನುಮಂತ ಹೆಗ್ಗಾಪುರ, ಶಂಕರಗೌಡ, ತಿಮ್ಮನಗೌಡ ವ್ಯಾಕರನಾಳ ಇತರರಿದ್ದರು.

ನರೇಗಾ ಯೋಜನೆಯ ನೈಜ ಕಾರ್ಮಿಕರಿಗೆ ಕೂಲಿ ಪಾವತಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಅರ್ಹರಿಗೆ ಕೂಲಿ ಪಾವತಿಸಲು ನರೇಗಾ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕೂಲಿಕಾರರಿಂದ ಹಣದ ಬೇಡಿಕೆ ಇಟ್ಟಿರುವುದು ಸತ್ಯಕ್ಕೆ ದೂರವಾದ ಮಾತು.

ಮೇಘಪ್ಪ ರಾಠೋಡ

ಅಧ್ಯಕ್ಷ, ನಾಗಲಾಪುರ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net