

ಹಟ್ಟಿಚಿನ್ನದಗಣಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ 1700 ಕೆಜಿ ಬದಲಿಗೆ 1800 ಕೆಜಿ ಚಿನ್ನ್ ಉತ್ಪಾದಿಸುವ ಗುರಿ ನಿಗದಿಪಡಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ 1097 ಕೆಜಿ ಚಿನ್ನ ಉತ್ಪಾದಿಸಿದ್ದು, ಉಳಿದ ಮೂರು ತಿಂಗಳಲ್ಲಿ ನಿಗದಿತ ಗುರಿ ತಲುಪುವ ವಿಶ್ವಾಸವಿದೆ ಎಂದು ಗಣಿ ಕಂಪನಿ ಅಧ್ಯಕ್ಷ ಜೆ.ಟಿ.ಪಾಟೀಲ್ ಹೇಳಿದರು.
ಇದನ್ನೂ ಓದಿ: ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನ
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 991 ಕೋಟಿ ರೂ. ವೆಚ್ಚದಲ್ಲಿ ಗಣಿ ಕಂಪನಿ ಅಭಿವೃದ್ಧಿ, ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಮನೆಗಳ ನಿರ್ಮಾಣ, ರಸ್ತೆ, ಆಸ್ಪತ್ರೆ, ಕ್ರೀಡಾಂಗಣ ಅಭಿವೃದ್ಧಿ, ಕುಡಿವ ನೀರಿನ ಯೋಜನೆ, ಸೋಲಾರ್ ವಿದ್ಯುತ್ ಉತ್ಪಾದನೆ ಸೇರಿ ಇತರ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರ ಸಿಎಂ ಚಾಲನೆ ನೀಡಲಿದ್ದಾರೆ.
2023-24ನೇ ಸಾಲಿನಲ್ಲಿ ಗಣಿಕಂಪನಿ ನಿವ್ವಳ 239 ಕೋಟಿ ರೂ.ಲಾಭಗಳಿಸಿದೆ. ಇದರಲ್ಲಿ ಶೇ.30 ಲಾಭಾಂಶ ಸರ್ಕಾರಕ್ಕೆ ನೀಡಲಾಗಿದೆ. 5 ಕೋಟಿ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲಾಗಿದೆ ಎಂದು ತಿಳಿಸಿದರು.
ಗಣಿ ಕಾರ್ಮಿಕರ ಹೊಸ ವೇತಮ ಒಪ್ಪಂದದಲ್ಲಿ ಗಣಿ ಕಾರ್ಮಿಕ, ಕರ್ತವ್ಯದ ವೇಳೆ, ಹೊರಗಡೆ ಅಪಘಾತದಲ್ಲಿ ಮೃತಪಟ್ಟರೆ, ಶೇ.90 ಅಂಗಾಂಗ ಊನವಾಗಿದ್ದರೆ ಆತನ ಕುಟುಂಬದವರಿಗೆ ಜೀವ ವಿಮೆ ಮೊತ್ತ ಒಂದು ಕೋಟಿ ರೂ. ದೊರೆಯಲಿದೆ.
ಭಾಗಶಃ ಊನವಾಗಿದ್ದರೆ 80 ಲಕ್ಷ ರೂ. ಬರಲಿದೆ. ಸಹಜ ಸಾವುಗಳಿಗೆ ಈ ಸೌಲಭ್ಯ ಇಲ್ಲ. ಸ್ಥಳೀಯ ಎಸ್‌ಬಿಐಯಲ್ಲಿ ಖಾತೆ ಹೊಂದಿ, ಸಂಬಳ ಪಡೆಯುವವರಿಗೆ ಮಾತ್ರ ಸಿಗಲಿದೆ ಎಂದು ಜೆ.ಟಿ.ಪಾಟೀಲ್ ತಿಳಿಸಿದರು.
ಕಂಪನಿಯ ವ್ಯವಸ್ಧಾಪಕ ನಿರ್ದೇಶಕಿ ಆರ್.ಶಿಲ್ಪಾ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಉಪಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಸೈಫುಲ್ಲಾ ಖಾನ್, ಹಿರಿಯ ವ್ಯವಸ್ಧಾಪಕ(ಮಾಸ) ಯಮನೂರಪ್ಪ, ಹಣಕಾಸು ವಿಭಾಗದ ವ್ಯವಸ್ಧಾಪಕ ಪ್ರಭುನಾಥ, ಭೂಕೆಳಮೈ ಅಧಿಕಾರಿಗಳಾದ ಅರುಣ ಘೋಷ್,
ಸಂತೋಷ ಕುಮಾರ, ಮೋಹನ್‌ಸಿಂಗ್, ಲೋಹ ವಿಭಾಗದ ವಿಧಾತ್ರಿ, ಕಂಪನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಸಂತಕುಮಾರ, ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ.ಶಫಿ, ಪ್ರಮುಖರಾದ ಶಾಂತಪ್ಪ ಅನ್ವರಿ, ಚಂದ್ರಶೇಖರ್ ಹಟ್ಟಿ, ವೆಂಕೋಬ್ ಮಿಯ್ಯಪುರ, ತಿಪ್ಪಣ್ಣ, ಮೈನುದ್ದೀನ್, ನಾಗರೆಡ್ಡಿ ಜೇರಬಂಡಿ, ಸಿದ್ದಪ್ಪ ಮುಂಡರಿಗಿ ಇತರರಿದ್ದರು.