4 ನಿಗಮಗಳಿಂದ 1800 ಕೋಟಿ ನಷ್ಟ

h26- Savadi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕರೊನಾ ಲಾಕ್​ಡೌನ್​ನ 60 ದಿನಗಳ ನಂತರ ರಾಜ್ಯಾದ್ಯಂತ ಪುನಃ ಬಸ್ ಸಂಚಾರ ಆರಂಭಿಸಲಾ ಗಿದ್ದು, ನಾಲ್ಕೂ ನಿಗಮಗಳಿಗೆ ಈವರೆಗೆ ಒಟ್ಟು 1800 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ವಾಯವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಾರಿಗೆ ನಿಗಮಗಳಲ್ಲಿ ಉಂಟಾಗುತ್ತಿರುವ ನಷ್ಟ, ಬರುತ್ತಿರುವ ಆದಾಯದ ಕುರಿತು ಪ್ರಗತಿ ಪರಿಶೀಲನೆ ಹುಬ್ಬಳ್ಳಿಯಿಂದ ಆರಂಭವಾಗಿದೆ. ಪರಸ್ಪರ ಅಂತರ ಕಾಯ್ದುಕೊಂಡು ಪ್ರಯಾಣ ಕೈಗೊಳ್ಳಬೇಕಿರುವುದರಿಂದ ಕರೊನಾ ನಂತರವೂ ನಷ್ಟ ಮುಂದುವರಿಯಲಿದೆ. ಸಿಬ್ಬಂದಿಗೆ ಸಂಬಳಕ್ಕಾ ಗಿಯೇ 320 ಕೋಟಿ ರೂ. ಬೇಕಾಗುತ್ತದೆ ಎಂದರು.

ಸಂಸ್ಥೆಯಲ್ಲಿ 1.30 ಲಕ್ಷ ಸಿಬ್ಬಂದಿ ಇದ್ದಾರೆ. ರಾಜ್ಯ ಸರ್ಕಾರ ಏಪ್ರಿಲ್ ತಿಂಗಳ ವೇತನಕ್ಕೆ ಅನುದಾನ ನೀಡಿದೆ. ಮೇ ತಿಂಗಳಿಗೆ ಅರ್ಧ ಹಣ ನೀಡಿದ್ದು, ಇನ್ನಷ್ಟು ಬಾಕಿ ಇದೆ. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮತ್ತಷ್ಟು ಅನುದಾನ ಕೋರಲಾಗುವುದು ಎಂದರು.

ವಾಯವ್ಯ ಸಾರಿಗೆ ಸಂಸ್ಥೆಗೆ ಈವರೆಗೆ 416 ಕೋಟಿ ರೂ. ನಷ್ಟವಾಗಿದೆ. ಪ್ರತಿ ತಿಂಗಳು 90 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ವೇತನಕ್ಕೆ ಮಾಸಿಕ 96 ಕೋಟಿ ರೂ., ಡೀಸೆಲ್​ಗೆ 90 ಕೋಟಿ ರೂ. ಬೇಕು. ಡೀಸೆಲ್ ದರ 2014ಕ್ಕೆ ಹೋಲಿಸಿದರೆ ಈಗ ಶೇ. 30ರಷ್ಟು ಹೆಚ್ಚಾಗಿದೆ. ಆದರೆ, ಟಿಕೆಟ್ ದರ ಹೆಚ್ಚಾಗಿಲ್ಲ. ದೊಡ್ಡ ಮಟ್ಟದ ಹಾನಿಗೆ ಇದೇ ಕಾರಣ ಎಂದರು.

ಪ್ರಯಾಣಿಕರ ಲಭ್ಯತೆ: ಸದ್ಯ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಸ್ ಸೇವೆ ನೀಡಲಾಗುತ್ತಿದೆ. ದೂರದ ಊರುಗಳ ಪ್ರಯಾಣ ಅವಧಿಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸೇವೆ ನೀಡಲಾಗುವುದು. ಪ್ರಯಾಣಿಕರ ಲಭ್ಯತೆ ಆಧರಿಸಿ ಶೀಘ್ರ ರಾತ್ರಿ ಸಂಚಾರ ಪುನಾರಂಭ ಮಾಡಲಾಗುವುದು. ಸದ್ಯ ಪ್ರತಿ ಬಸ್ಸಿನಲ್ಲಿ 30 ಜನರಿಗಷ್ಟೆ ಅವಕಾಶವಿರುತ್ತದೆ. ಜೂನ್ 1ರ ನಂತರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಸಿಬ್ಬಂದಿಯ ಒವರ್ ಟೈಮ್ (ಒಟಿ) ಕರ್ತವ್ಯ ಕಡಿಮೆ ಮಾಡಿ, ಎಲ್ಲರನ್ನೂ ಬಳಸಿಕೊಳ್ಳಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಈಗಿರುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಿಲ್ಲ. ಹೊಸ ನೇಮಕಾತಿಯೂ ಸದ್ಯಕ್ಕಿಲ್ಲ. ವರ್ಷದ ಹಿಂದೆ 2500 ಚಾಲಕ, ನಿರ್ವಾಹಕ ಹುದ್ದೆ ನೇಮಕಾತಿಗೆ ಹೊರಡಿಸಲಾಗಿದ್ದ ಅಧಿಸೂಚನೆ ತಡೆ ಹಿಡಿಯಲಾಗಿದೆ ಎಂದು ಉತ್ತರಿಸಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್. ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಇತರರು ಉಪಸ್ಥಿತರಿದ್ದರು.

ಅನುದಾನ ನೀಡಿದ್ದಕ್ಕೆ ಸನ್ಮಾನ: ಸರ್ಕಾರ ಸಾರಿಗೆ ನಿಗಮಗಳ ಸಿಬ್ಬಂದಿಯ ಏಪ್ರಿಲ್ ವೇತನಕ್ಕೆ 322 ಕೋಟಿ ರೂ. ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ ಣ ಸವದಿ ಅವರನ್ನು ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಸನ್ಮಾನಿಸಿದರು. ಕೆಎಸ್​ಆರ್​ಟಿಸಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಪಾಟೀಲ, ಪ್ರಧಾನ ಕಾರ್ಯದರ್ಶಿ ಪಿ.ವೈ. ನಾಯಕ್ ಅವರು ಸಚಿವರನ್ನು ಸನ್ಮಾನಿಸಿ ಇದಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿದರು. ಕಿರಣಕುಮಾರ ಬಸಾಪುರ, ವೈ.ಎಂ. ಶಿವರಡ್ಡಿ, ಎಫ್.ಸಿ. ಹಿರೇಮಠ, ವಿವೇಕಾನಂದ ವಿಶ್ವಜ್ಞ, ಬಸವಲಿಂಗಪ್ಪ ಬೀಡಿ, ಸಂತೋಷಕುಮಾರ, ನಿತಿನ್ ಹೆಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net