ಮಾನವ ಸರಪಳಿ ನಿರ್ಮಾಣಕ್ಕೆ 18 ಸಾವಿರ ಜನರ ಅಗತ್ಯ

SRP_09-02jpj
ಪಟ್ಟಣದ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ತಾಲೂಕು ಮಟ್ಟದ ಅಧಿಕಾರಿ-ಸಿಬ್ಬಂದಿಯೊಂದಿಗೆ ಚರ್ಚಿಸಿದರು.
Published on

ಶ್ರೀರಂಗಪಟ್ಟಣ: ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿ ನಿರ್ಮಾಣಕ್ಕೆ 18 ಸಾವಿರ ಜನರು ಭಾಗಿಯೊಂದಿಗೆ ಯಶಸ್ವಿಗೊಳಿಸಲು ಎಲ್ಲ ಇಲಾಖೆ ಅಧಿಕಾರಿ-ಸಿಬ್ಬಂದಿ ಕ್ರಮ ವಹಿಸಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಾಕೀತು ಮಾಡಿದರು.


ಪಟ್ಟಣದ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕ್ಷೇತ್ರದ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಕ್ಷೇತ್ರದ ಗಡಿ ರಾಗಿಮುದ್ದನಹಳ್ಳಿ ಗೇಟ್‌ನಿಂದ ವಿರಿಜಾ ನಾಲೆಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಸಂಕಲ್ಪ ಸೌಧವರೆಗಿನ ಮೈಸೂರು ಜಿಲ್ಲೆ ಗಡಿಯವರೆಗೂ ಸುಮಾರು 21 ಕಿ.ಮೀ ದೂರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆಗೆ ಮಾನವ ಸರಪಳಿ ನಿರ್ಮಾಣಕ್ಕೆ ಬರೋಬ್ಬರಿ 18 ಸಾವಿರ ಜನರ ಅವಶ್ಯಕತೆ ಎದುರಾಗಿದೆ. ಈ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಿಬ್ಬಂದಿ, ಕೃಷಿ, ತೋಟಗಾರಿಕೆ, ರೇಷ್ಮೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಬಕಾರಿ, ಅಗ್ನೀಶಾಮಕ, ನೀರಾವರಿ, ಲೋಕೋಪಯೋಗಿ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಪುರಸಭೆ, ಪೊಲೀಸ್ ಇಲಾಖೆ ಖಾಸಗಿ ಸಂಸ್ಥೆಗಳಾಸ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳು ಮತ್ತು ಗಾರ್ಮೆಂಟ್ಸ್ ನೌಕರರು ಸೇರಿದಂತೆ ಹೆದ್ದಾರಿ ಬಳಿಯಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರನ್ನು ಸಂಘಟಿಸಿ ಕರೆತರಬೇಕು. ಕ್ಷೇತ್ರದಲ್ಲಿ 4 ರಿಂದ 5 ಜನ ನೋಡಲ್ ಅಧಿಕಾರಿ ನೇಮಕಗೊಳಿಸುತ್ತಿದ್ದು, ಪ್ರತಿ 4 ಕಿ.ಮಿ ವ್ಯಾಪ್ತಿಯಲ್ಲಿ ಈ ನೋಡಲ್ ಅಧಿಕಾರಿ ಹಾಗೂ ಪ್ರತಿ 1 ಕಿ.ಮಿಗೆ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿ ವಹಿಸಿ 800 ಜನರನ್ನು ಜಾಗೃತಿ ಅಭಿಯಾನಕ್ಕೆ ನಿಯೋಜನೆಗೋಳಿಸಬೇಕು.


ಸೆ.15ರ ಭಾನುವಾರ ಬೆಳಗ್ಗೆ 8 ರಿಂದ 8.30ರವರೆಗೆ 30 ನಿಮಿಷಗಳ ಕಾಲ ನಡೆಯುವ ಪ್ರಜಾಪ್ರಭುತ್ವ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಸರಿಯಾದ ಸಮಯಕ್ಕೆ ಆರಂಭವಾಗುವ ಜತೆಗೆ ಭಾಗಿಯಾಗುವ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಜನರು ಆಯಾ ವ್ಯಾಪ್ತಿಯಲ್ಲಿ ಆಹಾರ ವ್ಯವಸ್ಥೆ, ಕುಡಿಯುವ ನೀರು, ಪ್ರತಿ ಕಿ.ಮೀ.ಗೆ ವೈದ್ಯರ ಸೇವೆ-ವೈದ್ಯಕೀಯ ಸೌಲಭ್ಯ, ಪೊಲೀಸ್ ಭದ್ರತೆಯನ್ನು ಸಾರಿಗೆ ವ್ಯವಸ್ಥೆಯೊಂದಿಗೆ ಕಲ್ಪಿಸಿ ಯಾವುದೇ ರೀತಿಯ ಲೋಪ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ನೆರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೇಣು, ಬಿಇಒ ಆರ್.ಪಿ.ಮಹೇಶ್, ಡಿವೈಎಸ್ಪಿ ಎಚ್.ಎಸ್.ಮುರುಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಗಣಪತಿ ಹಾಗೂ ಎಲ್ಲ ಅಧಿಕಾರಿ-ಸಿಬ್ಬಂದಿ ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net