

ಹರಪನಹಳ್ಳಿ: ಪ್ರತಿ ವರ್ಷದಂತೆ ಶಿವನಾರದಮುನಿ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರಿಸಲು ಸಹಕರಿಸಬೇಕೆಂದು ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.
ಇದನ್ನೂ ಓದಿ: ಸಂಭ್ರಮದಿಂದ ನಡೆದ ಬಂಡಿಬಸವೇಶ್ವರ ರಥೋತ್ಸವ
ತಾಲೂಕಿನ ಚಿಗಟೇರಿ ಗ್ರಾಮದ ಶಿವನಾರದಮುನಿ ದೇವಸ್ಥಾನ ಆವರಣದಲ್ಲಿ ಶನಿವಾರ ರಥೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಾರದಮುನಿ ಸ್ವಾಮಿ ರಥೋತ್ಸವ ಏ.18ರಂದು ನಡೆಯಲಿದ್ದು, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಹಾವೇರಿ, ಹಾಸನ ಸೇರಿದಂತೆ ಇತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದಾರೆ. ಭಕ್ತರಿಗೆ ಸೌಲಭ್ಯಗಳನ್ನ ಒದಗಿಸಬೇಕು.
ದೇವಸ್ಥಾನ ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದು ಭಕ್ತಾದಿಗಳ ಕರ್ತವ್ಯವಾಗಿದೆ. ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ನೀರಿನ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.
ಚಿಗಟೇರಿ ಠಾಣೆ ಪಿಎಸ್‌ಐ ನಾಗರತ್ನಮ್ಮ ಮಾತನಾಡಿ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಒದಗಿಸಲು ಎಲ್ಲ ತಯಾರಿ ನಡೆಸಲಾಗಿದೆ. ಜಾತ್ರೆ ವೇಳೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಟ್ರ್ಯಾಕ್ಟರ್‌ಗಳು ಹಾಗೂ ಇತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ ಎಂದರು.
ಪ್ರಮುಖರಾದ ಹೊಳಲ್ಕೆರೆ ವೇದಮೂರ್ತಿ, ಹುಣಸಿಹಳ್ಳಿ ಜಾತಪ್ಪ, ಸುರೇಶ್, ಪಲ್ಲಾಗಟ್ಟೆ ಎಲ್‌ಐಸಿ ನಾಗರಾಜ್, ಗಾಂಧಿನಗರ ಜಯಣ್ಣ, ದ್ಯಾಮನಗೌಡ್ರು, ರಾಜಣ್ಣ, ಪರಸಪ್ಪನವರ ಹಾಲಪ್ಪ, ಬಸವನಗೌಡ್ರು, ಜಯನಗೌಡ್ರು ಇತರರಿದ್ದರು.