ಒಂದೇ ದಿನ 18 ಜನರಿಗೆ ಸೋಂಕು ದೃಢ

21srt-1
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲೆಯ ಜನರಿಗೆ ಕರೊನಾ ವೈರಸ್ ಭಾನುವಾರ ಆಘಾತ ನೀಡಿದ್ದು, ಮೂವರು ಬಾಲಕರು ಸೇರಿ ಜಿಲ್ಲೆಯಲ್ಲಿ ಬರೋಬ್ಬರಿ 18 ಜನರಿಗೆ ಸೋಂಕು ವಕ್ಕರಿಸಿದೆ. ಜಿಲ್ಲೆಯಲ್ಲಿ ಮೇ 23ರಂದು ಏಕಕಾಲಕ್ಕೆ 15 ಜನರಿಗೆ ಸೋಂಕು ದೃಢಪಟ್ಟಿತ್ತು. ಅದರ ನಂತರ ಭಾನುವಾರ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಇದರಿಂದ ಜಿಲ್ಲೆಯ ಜನರು ಬೆಚ್ಚಿಬೀಳುವಂತಾಗಿದೆ.

ಯಾವುದೇ ಮುಂಜಾಗ್ರತೆ ಇಲ್ಲದೆ ಎಲ್ಲೆಂದರಲ್ಲಿ ಓಡಾಡುವ ಜನರಿಗೆ ವೈರಸ್ ಎಚ್ಚರಿಕೆ ಗಂಟೆ ಬಾರಿಸಿದ್ದು, ಮಾಸ್ಕ್ ಧರಿಸದೆ ಓಡಾಡುವುದು, ದೈಹಿಕ ಅಂತರ ಕಾಪಾಡಿಕೊಳ್ಳದಿರುವುದರಿಂದ ಜಿಲ್ಲೆಯಲ್ಲಿ ವೈರಸ್ ಹಾವಳಿ ಹೆಚ್ಚಾಗುವ ಲಕ್ಷಣಗಳಿವೆ.

ಗ್ರಾಮೀಣ ಪ್ರದೇಶ ಕ್ಕೂ ಸೋಂಕು ಕಾಲಿಟ್ಟಿದ್ದರಿಂದ ಜನರು ಭಯಭೀತರಾಗಿದ್ದಾರೆ. ಗದಗ ತಾಲೂಕಿನ ಕೋಟು ಮಚಗಿ ಗ್ರಾಮದ ಪಿ-7389 ಪುರುಷನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಆರು ಜನರಿಗೆ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಿ ಕೊಡಲಾಗಿತ್ತು. ಇದರಲ್ಲಿ 27 ವರ್ಷದ ಪುರುಷ, 28 ವರ್ಷದ ಪುರುಷ, 53 ವರ್ಷದ ಮಹಿಳೆ, 6 ವರ್ಷದ ಬಾಲಕ, 31 ವರ್ಷದ ಮಹಿಳೆ, 55 ವರ್ಷದ ಪುರುಷನಿಗೆ ಕರೊನಾ ಸೋಂಕು ತಗುಲಿದೆ. ಉಳಿದ ವರದಿಗಳು ನೆಗೆಟಿವ್ ಬಂದಿವೆ.

ಮುಂಬೈನಿಂದ ಆಗಮಿಸಿದ ಗದಗ- ಬೆಟಗೇರಿ ನಗರ ಸಭೆಯ ಸೆಟಲ್​ವೆುಂಟ್ ಪ್ರದೇಶದ ಪಿ-7387 ಹಾಗೂ ಪಿ-7388 ಅವರಿಗೆ ಜೂ. 16 ರಂದು ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಗುರುತಿಸಿ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಇದರಲ್ಲಿ 24 ವರ್ಷದ ಪುರುಷ, 21 ವರ್ಷದ ಮಹಿಳೆ, 33 ವರ್ಷದ ಪುರುಷ, 68 ವರ್ಷದ ವೃದ್ಧೆ, 6 ವರ್ಷದ ಬಾಲಕ ಹಾಗೂ 31 ವರ್ಷದ ಪುರುಷನಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಪಿ-7386ರ ಸಂರ್ಪದಿಂದ 12 ವರ್ಷದ ಬಾಲಕ ಹಾಗೂ 5 ವರ್ಷದ ಬಾಲಕನಿಗೆ ಸೋಂಕು ಬಂದಿದೆ. ಶಿರಹಟ್ಟಿ ಪಟ್ಟಣದ 29 ವರ್ಷದ ಮಹಿಳೆ ಹಾಗೂ ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾದ 35 ವರ್ಷದ ಪುರುಷ, ರೋಣ ತಾಲೂಕಿನ ಕುರಡಗಿ 65 ವರ್ಷದ ವೃದ್ಧ ಹಾಗೂ ಗದಗ ಎಸ್.ಎಂ. ಕೃಷ್ಣ ನಗರದ ನಿವಾಸಿ 75 ವರ್ಷದ ವೃದ್ಧೆಗೆ ಸೋಂಕು ಇರುವುದು ಧೃಢಪಟ್ಟಿದೆ. ಎಲ್ಲರನ್ನೂ ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಶಿರಹಟ್ಟಿಗೂ ವಕ್ಕರಿಸಿತು ಮಹಾಮಾರಿ: ಮಹಾಮಾರಿ ಕರೊನಾ ಸೋಂಕು ಶಿರಹಟ್ಟಿ ತಾಲೂಕಿಗೂ ವಕ್ಕರಿಸಿದ್ದು ಗರ್ಭಿಣಿ ಸೇರಿ ಇಬ್ಬರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.

ಮಜ್ಜೂರ ತಾಂಡಾದ 29 ವರ್ಷದ ಗರ್ಭಿಣಿ ಹಾಗೂ ಶಿರಹಟ್ಟಿ ಪಟ್ಟಣದ ಮಟ್ಟಿಬಾವಿ ಪ್ಲಾಟ್ ನಿವಾಸಿ 34 ವರ್ಷದ ಯುವಕನಿಗೆ ಕರೊನಾ ಪಾಸಿಟಿವ್ ಕಂಡುಬಂದಿದ್ದು ಶನಿವಾರ ಇಬ್ಬರನ್ನೂ ಜಿಮ್್ಸ ಆಸ್ಪತೆಗೆ ದಾಖಲಿಸಲಾಗಿದೆ.

ಮಜ್ಜೂರ ತಾಂಡಾದ ಮಹಿಳೆಯ ಅಣ್ಣ ಗೋವಾದಲ್ಲಿ ವಾಸವಾಗಿದ್ದು ಒಂದು ವಾರದ ಹಿಂದೆ ಮಜ್ಜೂರಿಗೆ ಬಂದು ಹೋಗಿದ್ದರು. ಹೀಗಾಗಿ, ಅವರಿಂದಲೇ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಈಕೆ 8 ತಿಂಗಳು ಗರ್ಭಿಣಿಯಾಗಿದ್ದರಿಂದ ತಾಲೂಕು ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ಮಾಡಿಸಿಕೊಂಡಾಗ ಜ್ವರ ಇರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ವೈದ್ಯಾಧಿಕಾರಿ ಡಾ. ಚಂದ್ರು ಲಮಾಣಿ ಅವರು ಗಂಟಲ ದ್ರವ ಪರೀಕ್ಷೆ ಮಾಡಿಸಿದಾದ ಕರೊನಾ ಸೋಂಕು ಇರುವುದು ಕಂಡು ಬಂದಿದೆ.

ಇನ್ನು ಶಿರಹಟ್ಟಿ ಪಟ್ಟಣದ ಮಟ್ಟಿಬಾವಿ ಪ್ಲಾಟ್ ನಿವಾಸಿ ಲಾರಿ ಚಾಲಕನಾಗಿದ್ದು 10-12 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಾಗ ಸ್ಥಳೀಯ ಇಬ್ಬರು ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಆದರೆ, ಜ್ವರ ವಾಸಿಯಾಗದ ಕಾರಣ ಎರಡು ದಿನಗಳ ಹಿಂದೆ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಆದರೆ, ಈತನಿಗೆ ಹೇಗೆ ಸೋಂಕು ತಗುಲಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಮಜ್ಜೂರ ತಾಂಡಾ ಹಾಗೂ ಶಿರಹಟ್ಟಿ ಮಟ್ಟಿಬಾವಿ ಪ್ಲಾಟ್ ಪ್ರದೇಶವನ್ನು ಸೀಲ್​ಡೌನ್ ಮಾಡಿ ಅಲ್ಲಿಯ ನಿವಾಸಿಗಳಿಗೆ ಜಾಗ್ರತೆಯಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾಹಿತಿ ನೀಡಿದರು.

ಮಜ್ಜೂರ ತಾಂಡಾದ ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಜನ ಹಾಗೂ ಶಿರಹಟ್ಟಿ ಮಟ್ಟಿಬಾವಿ ಪ್ಲಾಟ್​ನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 10 ಜನರನ್ನು ಹರಿಪುರದ ಸರ್ಕಾರಿ ವಸತಿ ನಿಲಯದಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಪಟ್ಟಣದ ಇಬ್ಬರು ಖಾಸಗಿ ವೈದ್ಯರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದ್ರು ಲಮಾಣಿ ತಿಳಿಸಿದರು.

ಕುರಡಗಿ ಗ್ರಾಮದ ವೃದ್ಧೆಗೆ ಕರೊನಾ: ನರೇಗಲ್ಲ ಸಮೀಪದ ಕುರಡಗಿ ಗ್ರಾಮದ 75 ವರ್ಷದ ವೃದ್ಧೆಗೆ ಕರೊನಾ ದೃಢಪಟ್ಟಿದೆ. ನರೇಗಲ್ಲ ಠಾಣಾ ವ್ಯಾಪ್ತಿಯಲ್ಲಿ ಇದು ಪ್ರಥಮ ಕರೊನಾ ಪಾಸಿಟಿವ್ ಪ್ರಕರಣವಾಗಿದೆ. ಶನಿವಾರ ತಡ ರಾತ್ರಿ ವೃದ್ಧೆಯನ್ನು ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಭಾನುವಾರ ಬೆಳಗ್ಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 7 ಜನರನ್ನು ಗದಗನ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

ವೃದ್ಧೆ ನವಲಗುಂದ ಪಟ್ಟಣದ ಮಗಳ ಮನೆಗೆ ತೆರಳಿದ್ದರು. ಜೂ. 18ರಂದು ವೃದ್ಧೆಗೆ ತೀವ್ರ ಆರೋಗ್ಯ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನವಲಗುಂದದಿಂದ ಗದಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಜೂ. 19ರಂದು ಕರೊನಾ ಟೆಸ್ಟ್​ಗೆ ಮಾದರಿ ಕಳುಹಿಸಿದ್ದರು. ಜೂ. 20ರಂದು ವರದಿ ಪಾಸಿಟಿವ್ ಬಂದಿದ್ದರಿಂದ ವೃದ್ಧೆಯನ್ನು 108 ವಾಹನ ಮೂಲಕ ಶನಿವಾರ ತಡರಾತ್ರಿ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ವೃದ್ಧೆ ವಾಸವಾಗಿದ್ದ ಕುರಡಗಿಯ 2ನೇ ವಾರ್ಡ್ ಸಂರ್ಪಸುವ ರಸ್ತೆಗಳನ್ನು ಬ್ಯಾರಿಕೇಡ್ ಹಾಗೂ ಮುಳ್ಳಿನ ಕಂಟಿಗಳಿಂದ ಬಂದ್ ಮಾಡಲಾಗಿದೆ. ವೃದ್ಧೆಯ ದ್ವಿತೀಯ ಸಂಪರ್ಕದಲ್ಲಿದ್ದ 6 ಜನರನ್ನು ಅವರ ಮನೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಗ್ರಾ.ಪಂ., ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ.

ಗಜೇಂದ್ರಗಡದಲ್ಲಿ 87 ಜನರಿಗೆ ಕ್ವಾರಂಟೈನ್: ಗಜೇಂದ್ರಗಡದಲ್ಲಿ ಜೂ. 15ರಂದು ಆಯೋಜಿಸಿದ್ದ ಮದುವೆಗೆ ಬಂದಿದ್ದ ಬಾಗಲಕೋಟೆ ಜಿಲ್ಲೆಯ ಗುಡೂರ ಪಟ್ಟಣದ ಮಹಿಳೆಗೆ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಶನಿವಾರ 87 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಪಟ್ಟಣದ ಜನತಾ ಪ್ಲಾಟ್​ನಲ್ಲಿ ಆಯೋಜಿಸಿದ್ದ ಮದುವೆಗೆ ಆಗಮಿಸಿದ್ದ ಮಹಿಳೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಜೂ.17 ರಂದು ಹುಬ್ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.18 ರಂದು ಹುಬ್ಬಳಿಯ ಕೆಎಂಸಿಯಲ್ಲಿ ಗಂಟಲ ದ್ರವದ ತಪಾಸಣೆ ಮಾಡಿಸಿಕೊಂಡು ಮರಳಿ ಊರಿಗೆ ಹೋಗಿದ್ದಾರೆ. ಮಹಿಳೆಗೆ ಕರೊನಾ ಪಾಸಿಟಿವ್ ಲಕ್ಷಣ ಕಂಡು ಬರುವ ಸಾಧ್ಯತೆ ಇರುವುದರಿಂದ ಜನತಾ ಪ್ಲಾಟ್ ಹಾಗೂ ಪುರಸಭೆ ಎದುರಿನ ಬಡಾವಣೆಯಲ್ಲಿನ ಪ್ರಥಮ ಸಂಪರ್ಕಕ್ಕೆ ಬಂದಿದ್ದ 17 ಜನರನ್ನು ಕಾಲಕಾಲೇಶ್ವರ ಗ್ರಾಮದ ರಾಣಿ ಚನ್ನಮ ಶಾಲೆಯಲ್ಲಿ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 70 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಮಹಿಳೆಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಬಿ.ಎಸ್. ಭಜಂತ್ರಿ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net