ಕಟ್ಟಡ ಕಾಮಗಾರಿ ಪೂರ್ಣಕ್ಕೆ 18 ತಿಂಗಳ ಗಡುವು

minister dr.sharana prakash patil
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್
Published on

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಆಗುತ್ತಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದರೆ 18 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಗುತ್ತಿಗೆದಾರರಿಗೆ ಕಾಲಾವಕಾಶ ನೀಡಿದರು.

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಿದ್ವಾಯಿ ಮಾದರಿ ಆಸ್ಪತ್ರೆ ಕಟ್ಟಡದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, 2 ವರ್ಷದೊಳಗೆ ಪೂರ್ಣಗೊಳಿಸಲು ಕಾಲಾವಕಾಶ ನೀಡಲಾಗಿದೆ. ಆದರೆ ಇದು ತುಂಬಾ ವಿಳಂಬವಾಗುತ್ತದೆ ಎಂದರು.
ಮುಂದಿನ ಆರು ತಿಂಗಳೊಳಗೆ ಕಟ್ಟಡಕ್ಕೆ ಬೇಕಿರುವ ಸಾಮಗ್ರಿಗಳು, ಚಿಕಿತ್ಸೆಗೆ ಬೇಕಿರುವ ಉಪಕರಣಗಳು, ಸಿಬ್ಬಂದಿ ನೇಮಕಾತಿ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ ಅವರಿಗೆ ಸೂಚಿಸಿದರು. 50 ಕೋಟಿ ರೂ. ವೆಚ್ಚದಲ್ಲಿ 120 ಹಾಸಿಗೆಯ ಕ್ಯಾನ್ಸರ್ ಘಟಕ ನಿರ್ಮಾಣ ಆಗಬೇಕಿದೆ. ಕ್ಯಾನ್ಸರ್‌ಗೆ ಸಂಬಂಧಿಸಿದ ಎಲ್ಲ ಮಾದರಿಗೂ ಇಲ್ಲಿ ಚಿಕಿತ್ಸೆ ಸಿಗಲಿದೆ. ವಿಶೇಷವಾಗಿ ಕಿಮೋಥೆರಪಿ, ರೇಡಿಯೊಥೆರಪಿ ಕೂಡ ಸಿಗಲಿದೆ. ಜಿಲ್ಲೆಯ ಜನರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲ ಆಗುತ್ತದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದರು. ಕಟ್ಟಡ ನಿರ್ಮಾಣಗೊಂಡು ಕಾರ್ಡಿಯಾಲಜಿ ಘಟಕ ಶುರುವಾಗಿದೆ. ಆದರೆ ಇನ್ನೂ ಟೇಕ್‌ಆಫ್ ಆಗಿಯೇ ಇಲ್ಲ. ಒಟ್ಟಾರೆ ಆಸ್ಪತ್ರೆಯ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೇರಿಸಲಾಗುವುದು. ಬಡವರ ಮಕ್ಕಳು ಕೂಡ ಎಂಬಿಬಿಎಸ್ ಮಾಡಿ ವೈದ್ಯರಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಪ್ರತಿಭಾವಂತ ಮಕ್ಕಳು ವೈದ್ಯರಾದರೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸೇವೆ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net