18 ಲಕ್ಷ ರೂ. ವಂಚಿಸಿದ ಪೊಲೀಸ್ ಪೇದೆ

MND POLICE PEDE
Published on

ಮುಂಡಗೋಡ: ಯುವತಿಯಿಂದ 18 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ ಪೊಲೀಸ್ ಪೇದೆ ವಿರುದ್ಧ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಸನ ಜಿಲ್ಲೆಯ ಗಿರೀಶ ಎಸ್.ಎಂ. ಎಂಬಾತನ ಮೇಲೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದೊಡ್ಡೇರಿ ಗ್ರಾಮದ ಸುಚಿತ್ರಾ ಎಂ.ಆರ್. ಎಂಬ ಯುವತಿ ದೂರು ದಾಖಲಿಸಿದ್ದಾಳೆ.

ಪೇದೆ ಗಿರೀಶ ಎಸ್.ಎಂ. ಎಂಬುವರು ಮನೆ ಕಟ್ಟಲು ಹಣದ ಅವಶ್ಯಕತೆಯಿದೆ ಎಂದು ನನಗೆ ನಂಬಿಸಿ ಮೋಸದಿಂದ 2018 ಏ. 27ರಿಂದ 2023 ಆಗಸ್ಟ್ 23ರವರೆಗೆ ಆನ್​ಲೈನ್ ಮೂಲಕ 2021 ಏ. 28ರಂದು ಮುಂಡಗೋಡ ಕೆಎಚ್​ಬಿ ಕಾಲನಿ ಮನೆಯಲ್ಲಿ 2.50 ಲಕ್ಷ ರೂ. ಸೇರಿ ಹಂತ ಹಂತವಾಗಿ 18 ಲಕ್ಷ ರೂ. ಹಣ ತೆಗೆದುಕೊಂಡು ಮರಳಿ ಕೊಡದೆ ಮೋಸ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ.

ಹಣ ಮರಳಿ ಕೊಡದೆ ವಂಚಿಸಿರುವ ಪೇದೆ ಗಿರೀಶನ ವಿರುದ್ಧ ಕಳೆದ ವರ್ಷ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಎಸ್ಪಿ ಹಾಗೂ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು.

ಠಾಣೆಯಲ್ಲಿ ಸಂಧಾನ: ಕೆಲವು ತಿಂಗಳ ಹಿಂದೆ ಸಿಪಿಐ, ಪಿಎಸ್​ಐ ಸಮ್ಮುಖದಲ್ಲಿ ಯುವತಿ ಹಾಗೂ ಪೊಲೀಸ್ ಪೇದೆ ಗಿರೀಶ ನಡುವೆ ಸಂಧಾನ ನಡೆಸಲಾಯಿತು. ನಾನು ಹಂತ ಹಂತವಾಗಿ ನೀಡಿದ 18 ಲಕ್ಷ ರೂ. ಹಣ ಮರಳಿ ಕೊಡುವಂತೆ ಯುವತಿ ಪಟ್ಟು ಹಿಡಿದಳು. ಅಧಿಕಾರಿಗಳು ಯುವತಿಗೆ ಮರಳಿ ಹಣ ಕೊಡುವಂತೆ ಸೂಚಿಸಿ ಸಂಧಾನ ಮಾಡಿದ್ದರು. ಕೆಲ ತಿಂಗಳಲ್ಲಿ ಹಣ ಮರಳಿ ನೀಡುವುದಾಗಿ ಒಪ್ಪಿಕೊಂಡಿದ್ದ ಗಿರೀಶ, ಯುವತಿಗೆ ಚೆಕ್ ನೀಡಿ ಕಳುಹಿಸಿದ್ದ. ಆದರೆ, ಇದುವರೆಗೂ ಮರಳಿ ಹಣ ನೀಡದ ಕಾರಣ ಯುವತಿಯುಭಾನುವಾರ ಸಂಜೆ ಮುಂಡಗೋಡ ಠಾಣೆಗೆ ಬಂದು ಪೊಲೀಸ್ ಪೇದೆಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ನಾಪತ್ತೆ: ಯುವತಿ ಪ್ರಕರಣ ದಾಖಲಿಸುತ್ತಿದ್ದಂತೆ ಪೇದೆ ಗಿರೀಶ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ವಂಚನೆ ಮಾಡಿರುವ ಪೊಲೀಸ್ ಪೇದೆಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಯುವತಿ ಆಗ್ರಹಿಸಿದ್ದಾಳೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net