ಒಂದೇ ಕಂತಿಗೆ 18 ಲಕ್ಷ ರೂ. ವಿಮೆ!

28 anr cheq vitharane 1
ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುನೀಲ್ನ ತಾಯಿ ಎಂ.ಬಿ.ಸವಿತಾಗೆ ಆಯನೂರಿನ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ 18 ಲಕ್ಷ ರೂ. ಚೆಕ್ ವಿತರಿಸಲಾಯಿತು. ಎಚ್.ಬಿ.ನಾಗರಾಜ್, ಗುರುಪ್ರಸಾದ್, ಎನ್.ಶೈಲಾ, ಉಮೇಶ್, ಮಂಜುನಾಥ, ಶ್ರೀನಿವಾಸ್ ಇತರರಿದ್ದರು.
Published on

ಆಯನೂರು: ಆತ ಪಾವತಿಸಿದ್ದು ಒಂದೇ ಕಂತು. ಆದರೂ ದೊರೆತಿದ್ದು 18 ಲಕ್ಷ ರೂ. ವಿಮಾ ಮೊತ್ತ…
ಹೌದು, ಇದು ಕರ್ಣಾಟಕ ಬ್ಯಾಂಕಿನಲ್ಲಿ ವಿಮಾ ಪಾಲಿಸಿ ಹೊಂದಿದ್ದ ಸೊರಬ ತಾಲೂಕು ಸಾರೇಕೊಪ್ಪ ಗ್ರಾಮದ ಸುನೀಲ್ನ ಕತೆ.
ಶಿವಮೊಗ್ಗ ತಾಲೂಕು ಆಯನೂರಿನ ಬಾರ್ ಒಂದರಲ್ಲಿ ಕ್ಯಾಷಿಯರ್ ಆಗಿದ್ದ ಸುನೀಲ್ ಆಯನೂರು ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು ವರ್ಷಕ್ಕೆ 300 ರೂ.ಗಳ ಕೆಬಿಎಲ್ ಸುರಕ್ಷಾ ಪಾಲಿಸಿ ಹಾಗೂ ವಾರ್ಷಿಕ 25 ಸಾವಿರ ರೂ.ಗಳ ವಿಮಾ ಪಾಲಿಸಿ ತೆಗೆದುಕೊಂಡಿದ್ದ. ಆದರೆ ದುರದೃಷ್ಟವಶಾತ್ ಈತ ಕಳೆದ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವಾಗ ಶಿರಾಳಕೊಪ್ಪ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದ. ಪತಿ ಇಲ್ಲದೆ, ಇದ್ದೊಬ್ಬ ಮಗನನ್ನೂ ಕಳೆದುಕೊಂಡಿದ್ದ ಸುನೀಲ್‌ನ ತಾಯಿ ಎಂ.ಬಿ.ಸವಿತಾ ಕಂಗಾಲಾಗಿ ಹೋಗಿದ್ದರು. ಈಚೆಗೆ ಆಕೆ ಮಗ ಬ್ಯಾಂಕಿನಲ್ಲಿ ಹೊಂದಿದ್ದ ಖಾತೆಯನ್ನು ರದ್ದು ಮಾಡಿಸಲು ಬಂದಾಗ ಬ್ಯಾಂಕ್ ಅಧಿಕಾರಿಗಳು ವಿಮೆ ಬಗ್ಗೆ ಮಾಹಿತಿ ನೀಡಿದ್ದರು.
ಅದರಂತೆ ಸೋಮವಾರ ಸವಿತಾ ಅವರಿಗೆ ಕೆಬಿಎಲ್ ಸುರಕ್ಷಾ ಪಾಲಿಸಿಯಿಂದ 10 ಲಕ್ಷ ಹಾಗೂ ಇನ್ನೊಂದು ಪಾಲಿಸಿಯಿಂದ 8 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಲಾಯಿತು. ಈ ಪಾಲಿಸಿಯನ್ನು ಸುನೀಲ್ ಮೃತಪಡುವ ಕೆಲವೇ ತಿಂಗಳ ಹಿಂದೆ ಮಾಡಿಸಿದ್ದ.
ಚೆಕ್ ವಿತರಿಸಿ ಮಾತನಾಡಿದ ಬ್ಯಾಂಕಿನ ಎಜಿಎಂ ಎಚ್.ಬಿ.ನಾಗರಾಜ್, ಪ್ರತಿಯೊಬ್ಬರಿಗೂ ವಿಮೆ ಅನಿವಾರ್ಯ. ವರ್ಷಕ್ಕೆ 300 ರೂ. ಕಟ್ಟುವುದು ದುಬಾರಿಯಲ್ಲ. ಸಾವು ಎಲ್ಲರಿಗೂ ಬರುತ್ತೆ. ವಿಮಾ ಹಣ ನಿಮಗೆ ಕಷ್ಟದ ವೇಳೆಯಲ್ಲಿ ಅನುಕೂಲವಾಗಲಿದೆ. ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಖಾತೆಯಲ್ಲಿರುವ ಹಣ ತೆಗೆದುಕೊಳ್ಳಲು ಬಂದಾಗ ಮಗ ಪಾಲಿಸಿ ಮಾಡಿಸಿದ್ದನ್ನು ಬ್ಯಾಂಕಿನವರು ತಿಳಿಸಿದರು. ಗಂಡ ಇಲ್ಲದೆ, ಇದ್ದೊಬ್ಬ ಮಗ ರಸ್ತೆ ಅಪಘಾತಕ್ಕೆ ಈಡಾಗಿ ಮರಣ ಹೊಂದಿದ. ಬಹಳ ಕಷ್ಟದಿಂದ ಜೀವನ ಸಾಗಿಸುವಂತಾಗಿತ್ತು ಎಂದು ಸವಿತಾ ಹೇಳಿದರು.
ವಿಮಾ ಅಧಿಕಾರಿ ಗುರುಪ್ರಸಾದ್, ಆಯನೂರು ಶಾಖಾ ವ್ಯವಸ್ಥಾಪಕಿ ಎನ್.ಶೈಲಾ, ಅಧಿಕಾರಿಗಳಾದ ಉಮೇಶ್, ಮಂಜುನಾಥ, ಶ್ರೀನಿವಾಸ್, ಬ್ಯಾಂಕಿನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net