

ಬ್ಯಾಡಗಿ: ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಟ್ಟು 18 ಸಾಂಪ್ರದಾಯಿಕ ಕುಲಕಸುಬುಗಳನ್ನು ಸೇರಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಧಿಕಾರಿ ಸಂಜಯ ಕೋರೆ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕ್ಷೌರಿಕ ತರಬೇತಿ ಪಡೆದ ಫಲಾನುಭವಿಗಳಿಗೆ ಇತ್ತೀಚೆಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮುಖ್ಯವಾಗಿ ಕಮ್ಮಾರ, ಕುಂಬಾರ, ಚಮ್ಮಾರ, ಅಕ್ಕಸಾಲಿಗ, ಹೂಗಾರರು, ಕ್ಷೌರಿಕರು ಸೇರಿ ಹತ್ತಾರು ಕಸುಬುಗಳಿಗೆ ತರಬೇತಿ ನೀಡಲಾಗುತ್ತಿದೆ. ಆಸಕ್ತರಿಗೆ ಉದ್ಯೋಗ ತರಬೇತಿ, ಸಾಂಪ್ರದಾಯಿಕ ಕುಲಕಸುಬುಗಳಿಗೆ ಪ್ರೋತ್ಸಾಹಿಸುವ ಹಾಗೂ ಕಲಿಕೆಗೆ ಸೂಕ್ತ ಮಾರ್ಗದರ್ಶನ ನೀಡುವ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಂಡಿದೆ. ತರಬೇತಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಒಂದು ವಾರಗಳ ಕಾಲ ಪ್ರತಿದಿನ 8 ತಾಸಿನಂತೆ ಒಟ್ಟು 40 ಗಂಟೆ ತರಬೇತಿ ನೀಡಲಾಗುವುದು. ತರಬೇತಿ ಬಳಿಕ ಆಯಾ ವೃತ್ತಿಯ ಕಿಟ್ ವಿತರಿಸಲಾಗುವುದು ಎಂದರು.
ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ಕೌಶಲಾಧಾರಿತ ಶಿಕ್ಷಣ ಹಾಗೂ ಆಯಾ ವೃತ್ತಿಗಳಿಗೆ ತರಬೇತಿ ನೀಡುವುದರಿಂದ ಕಡಿಮೆ ಅವಧಿ ಹಾಗೂ ಅಲ್ಪ ಬಂಡವಾಳದಲ್ಲಿ ಉದ್ಯೋಗ ಮುಂದುವರಿಸಿಕೊಂಡು ಹೋಗಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸ್ವಯಂ ಉದ್ಯೋಗ ಹಾಗೂ ಸಣ್ಣಪುಟ್ಟ ಉದ್ಯೋಗಗಳಿಗೆ ಸಹಕಾರ ನೀಡುತ್ತಿದೆ ಎಂದರು.
ರಾಜ್ಯ ಕರಕುಶಲ ಸಮಿತಿಗಳ ಒಕ್ಕೂಟಗಳ ಅಧ್ಯಕ್ಷ ಶಿವಾನಂದ ಹಡಪದ, ಸದಸ್ಯರಾದ ದುಂಡೆಪ್ಪ ಕಾಯಕದ, ಮಂಜುನಾಥ ಹಡಪದ, ರೋಹಿಣಿ ಎಂ, ಗೀತಾ ಹಡಪದ, ಅಣ್ಣಪ್ಪ ಹಡಪದ, ನಾಗರಾಜ ಕಾಯಕದ ಇತರರಿದ್ದರು.