

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಶಾಸಕನಾಗಿ ಅಧಿಕಾರ ವಹಿಸಿಕೊಂಡ ಹದಿನಾಲ್ಕು ತಿಂಗಳಲ್ಲಿ 288.82 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ 18.55 ಕೋಟಿ ರೂ. ಅನುದಾನವನ್ನಷ್ಟೇ ನೀಡಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನದಿದಂಡೆ ಸಂರಕ್ಷಣೆ, ಗ್ರಾಮೀಣ ರಸ್ತೆ, ಕಡಲ್ಕೊರೆತ, ಅಲ್ಪಸಂಖ್ಯಾತರ ಕಾಲನಿ ರಸ್ತೆ, ಲೋಕೋಪಯೋಗಿ, ಪ.ಜಾತಿ ಸಮುದಾಯ ರಸ್ತೆ, ಪ. ಪಂ. ಕಾಲೊನಿ ರಸ್ತೆ, ಪ್ರಾರ್ಥನಾ ಮಂದಿರ, ಕೆರೆಗಳ ಅಭಿವೃದ್ಧಿ, ಮೀನುಗಾರಿಕಾ ಕೊಂಡಿ ರಸ್ತೆ, ನದಿಕೊರೆತ, ಕಿಂಡಿ ಅಣೆಕಟ್ಟು, ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಹಿತ ಸಚಿವರಿಗೆ 2023-24, 2024-25ರ ಅವಧಿಯಲ್ಲಿ ಮನವಿ ಸಹಿತ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ದೇಶಪೂರ್ವಕವಾಗಿ ಸಚಿವರ ಮೇಳೆ ಒತ್ತಡ ಹೇರಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದಂತೆ ತಡೆಯೊಡ್ಡುತ್ತಿದ್ದಾರೆ. ಜತೆಗೆ ಅನಗತ್ಯವಾಗಿ ಟೀಕಿಸುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.
ಕಾಪು ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ಮನೆ ನೀಡುವ ನಿಟ್ಟಿನಲ್ಲಿ ಜಾಗ ಗುರುತಿಸಿ, ವಿಂಗಡಿಸುವಂತೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಭೇಟಿಯಾಗಿ, ಮನವಿ ಮಾಡಿದ್ದೇನೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಹಾಗೂ ಅರಣ್ಯ ಸಚಿವರಿಗೂ ಮನವರಿಕೆ ಮಾಡಿದ್ದು, ಜಾಗ ನೀಡುವುದಕ್ಕಾಗಿ ಜಂಟಿ ಸರ್ವೆ ನಡೆಯುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.ನಿವೇಶನ ಹಂಚಿಕೆ ವಿಳಂಬಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಪಕ್ಷದ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಗೋಪಾಲಕೃಷ್ಣ ರಾವ್, ಶರಣ್‌ಕುಮಾರ್ ಮಟ್ಟು, ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಕಾಪು ಕ್ಷೇತ್ರದ ಹೆಜಮಾಡಿ ತಾಲೂಕು ಕ್ರೀಡಾಂಗಣದಲ್ಲಿ ಪುಟ್ಬಾಲ್, ಒಳಾಂಗಣ ಕ್ರೀಡಾಂಗಣ, ಈಜು ಕೊಳ ನಿರ್ಮಾಣ ಬಗ್ಗೆ 25.20 ಕೋಟಿ ರೂ. ಮಂಜೂರಾಗಿದೆ. ಜತೆಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮುಂದುವರಿದಿದೆ ಎಂದು ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.