

ಹಾಸನ: ಕರುನಾಡಿಗೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 50 ಜನರ ತಂಡವನ್ನು ರಚಿಸಿ ‘ಕನ್ನಡ ಜ್ಯೋತಿ ರಥಯಾತ್ರೆ’ ಆರಂಭಿಸಿದೆ. ಸೆ.17ರಂದು ಹಾಸನ ನಗರಕ್ಕೆ ಆಗಮಿಸುವ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ತಿಳಿಸಿದರು.
ಸಿಎಂ ಅವರಿಂದ ಹಂಪಿಯಲ್ಲಿ ಚಾಲನೆ ಪಡೆದ ರಥಯಾತ್ರೆ ಇದೀಗ ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿದೆ. ಸೆ.17ರಂದು ಅತ್ಯಂತ ಸಡಗರ, ಸಂಭ್ರಮದಿಂದ ಸ್ವಾಗತಿಸಲು ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ.17ರ ಮಂಗಳವಾರ ಬೆಳಗ್ಗೆ ರಥಯಾತ್ರೆಯನ್ನು ಡೇರಿ ವೃತ್ತದಲ್ಲಿ ಸ್ವಾಗತಿಸಿ ನಂತರ ರೈಲ್ವೆ ನಿಲ್ದಾಣ, ಬಿಎಸ್‌ಎನ್‌ಎಲ್ ಭವನ, ಜಿಲ್ಲಾಧಿಕಾರಿ ಕಚೇರಿ, ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ ಎದುರಿಂದ ಹಾಸನಾಂಬ ಕಲಾಕ್ಷೇತ್ರದವರೆಗೆ ಯಾತ್ರೆ ಸಂಚರಿಸಲಿದೆ. ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಕನ್ನಡ ಪರ ಸಂಘಟನೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಲಾತಂಡಗಳು ರಥಯಾತ್ರೆಯಲ್ಲಿ ಭಾಗಿಯಾಗಲಿವೆ ಎಂದು ಹೇಳಿದರು.
ವಿದ್ವಾಂಸರು, ಚಿಂತಕರು ಹಾಗೂ ಅಧಿಕಾರಿಗಳ ಕನ್ನಡ ಕುರಿತಾದ ಮಾತಿನ ಜತೆಗೆ ಹಿರಿಯ ಕಲಾವಿದರು, ಸಂಗೀತ ಶಿಕ್ಷಕರು, ಗಾಯಕರು ಹಾಗೂ ಜಿಲ್ಲಾಧಿಕಾರಿ ಕಚೇರಿ ತಂಡ, ಜಿಲ್ಲಾ ಪಂಚಾಯಿತಿ ತಂಡ ಮತ್ತು ವಿವಿಧ ಶಾಲೆ, ಇಲಾಖೆಗಳ ತಂಡಗಳು ಗೀತಗಾಯನ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಯಾತ್ರೆಗೆ ಮೆರುಗು ನೀಡಲಿದೆ. ರೈಲ್ವೆ ನಿಲ್ದಾಣದಲ್ಲಿ ಹೆಬ್ಬಾಲೆ ಮುಖ್ಯ ಶಿಕ್ಷಕ ಬಿ.ಡಿ.ಶಂಕರೇಗೌಡ, ಸಹ ಶಿಕ್ಷಕಿ ರಂಜಿತಾ ಹಾಗೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಸರ್ಕಾರಿ ನೌಕರರು ಹಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ವೇಣುಗೋಪಾಲ್, ನರಸಿಂಹಮೂರ್ತಿ, ಶಿವಸ್ವಾಮಿ, ಯೋಗೇಶ್, ಬಸವರಾಜು ಇದ್ದರು.