

ಖಾನಾಪುರ: ಕರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಪಟ್ಟಣದಲ್ಲಿ ಮೇ 11 ರಿಂದ ಮೇ 17ರ ವರೆಗೆ ಐದು ದಿನ ಎಲ್ಲ ರೀತಿಯ ವ್ಯಾಪಾರ-ವಹಿವಾಟು ನಿಷೇಧಿಸಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ಮಾಹಿತಿ ನೀಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಣದ ಮುಖಂಡರು, ವರ್ತಕರು, ರಸ್ತೆ ಬದಿ ವ್ಯಾಪಾರಸ್ಥರು ಮತ್ತು ಪಪಂ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಅವಧಿಯಲ್ಲಿ ಕಿರಾಣಿ, ದಿನಸಿ ಸೇರಿದಂತೆ ಎಲ್ಲ ರೀತಿಯ ಅಂಗಡಿ-ಮುಂಗಟ್ಟು ಮುಚ್ಚಬೇಕು.
ಲಾಕ್‌ಡೌನ್ ಸಂದರ್ಭದಲ್ಲಿ ಹಾಲು ಮಾರಾಟಕ್ಕೆ ಬೆಳಗ್ಗೆ ಮತ್ತು ಸಂಜೆ 7 ರಿಂದ 9 ಗಂಟೆವರೆಗೆ ಅವಕಾಶ ನೀಡಲಾಗಿದೆ. ತರಕಾರಿ ಮತ್ತು ಹಣ್ಣು ಮಾರಾಟಗಾರರು ನಿತ್ಯ ಸಂಜೆ 6ರವರೆಗೆ ಪಟ್ಟಣದ ಮನೆ-ಮನೆಗಳಿಗೆ ತೆರಳಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದಯವಿಟ್ಟು ಎಲ್ಲರೂ 5 ದಿನಗಳ ಕಾಲ ತಮ್ಮ-ತಮ್ಮ ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿದರು. ಪಿಎಸ್‌ಐ ಬಸಗೌಡ ಪಾಟೀಲ ಮಾತನಾಡಿ, ಸೋಮವಾರ ಬೆಳಗ್ಗೆ 11ರ ನಂತರ ಮುಂದಿನ ಭಾನುವಾರದ ವರೆಗೆ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಎಚ್ಚರಿಸಿದರು. ಪಪಂ ಮುಖ್ಯಾಧಿಕಾರಿ ವಿವೇಕ ಬನ್ನೆ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾದಾರ, ಅಪ್ಪಯ್ಯ ಕೋಡೋಳಿ, ವಿನಾಯಕ ಕಲಾಲ, ಗುಂಡು ತೋಪಿನಕಟ್ಟಿ, ಪಂಡಿತ ಓಗಲೆ, ರವಿ ಕಾಡಗಿ ಇತರರು ಇದ್ದರು.