

ಹುಬ್ಬಳ್ಳಿ: ಪರೀಕ್ಷೆ ಫಲಿತಾಂಶ ವಿಳಂಬ, ವಿದ್ಯಾರ್ಥಿ ವೇತನ ನೀಡದಿರುವುದು, ಕಾಲೇಜು ಶುಲ್ಕ ಹೆಚ್ಚಳ ವಿರೋಧಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಡಿ. 17ರಂದು ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳ ಬಂದ್ಗೆ ಕರೆ ನೀಡಲಾಗಿದೆ ಎಂದು ಎನ್ಎಸ್ಯುುಐ ಪ್ರಧಾನ ಕಾರ್ಯದರ್ಶಿ ರೋಹಣ ಹಿಪ್ಪರಗಿ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಇದುವರೆಗೂ ನೀಡುತ್ತಿದ್ದ ಸೌಲಭ್ಯಗಳನ್ನು ಕಡಿತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್ಇಪಿಯಿಂದ ಅನನುಕೂಲಗಳೇ ಹೆಚ್ಚಾಗಿವೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದಲ್ಲಿದ್ದ ಬಸ್ ಪಾಸ್ ಸೌಲಭ್ಯವೂ ಇದೀಗ ಸಿಗುತ್ತಿಲ್ಲ. ಲ್ಯಾಪ್ಟಾಪ್, ಸೈಕಲ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಇಂತಹ ಅನೇಕ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಈಗಾಗಲೇ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ಸ್ವಯಂಪ್ರೇರಿತ ಬಂದ್ ಮಾಡುವುದಾಗಿ ಅವರು ತಿಳಿಸಿದ್ದಾರೆ ಎಂದರು.
ಡಿ. 17ರಂದು ಬೆಳಗ್ಗೆ 11ಕ್ಕೆ ನಗರದ ಚನ್ನಮ್ಮ ವೃತ್ತದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಯಲಿದೆ. ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಚಳಿಗಾಲ ಅಧಿವೇಶನದೊಳಗೆ ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಬಗೆ ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಎನ್ಎಸ್ಯುುಐನ ಶಿವಾ ಬೆಂಡಿಗೇರಿ, ಅಲ್ತಾಫ್, ರಾಹುಲ್ ಬೆಳದಡಿ, ಓಂಕಾರ್, ಅಭಿ, ಬಸವರಾಜ, ಕಾರ್ತಿಕ, ಜಶ್ವಂತ, ಇತರರು ಗೋಷ್ಠಿಯಲ್ಲಿದ್ದರು.