

ಬೆಟ್ಟದಪುರ: ಸಮೀಪದ ಪುಟ್ಟಣ್ಣ ಕಣಗಾಲ್ ಗ್ರಾಮದಲ್ಲಿ ಫೆ.17ರಿಂದ 19ರವರೆಗೆ ಶ್ರೀ ದಿಡ್ಡಿಯಮ್ಮ ತಾಯಿಯ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ.
17ರಂದು ಬೆಳಗ್ಗೆ 7 ಗಂಟೆಗೆ ಪುಟ್ಟಣ್ಣ ಕಣಗಾಲಿನ ಕಾವೇರಿ ನದಿ ತೀರದಿಂದ ಪಂಚಕಳಶದೊಂದಿಗೆ ದಿಡ್ಡಿಯಮ್ಮನ ಬೆಳ್ಳಿ ವಿಗ್ರಹವನ್ನು ಬಸವ ಮೆರವಣಿಗೆಯೊಂದಿಗೆ ರಾಜಬೀದಿಯಿಂದ ದೇವಿ ಸನ್ನಿಧಿವರೆಗೆ ಕರೆತರಲಾಗುವುದು. ನಂತರ ದೇವಸ್ಥಾನ ಆವರಣದಲ್ಲಿ ಬೆಳಗ್ಗೆ 9ರಿಂದ 12.30ರವರೆಗೆ ಫಲಸಮರ್ಪಣೆ, ಗಣಪತಿ ಪೂಜೆ, ಪುಣ್ಣಾಃವಾಚನವಿಧಿ, ಸ್ಥಳಶುದ್ಧಿ, ಕಳಶ ಸ್ಥಾಪನೆ, ಗಂಗಾಪೂಜೆ, ದೇವನಾಂದಿ ಕೃವಾಭರಣೆ, ಮಹಾಸಂಕಲ್ಪ, ಯುತ್ವಿಗರಣೆ, ದಿಡ್ಡಿಯಮ್ಮನ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ಸಂಜೆ 6 ರಿಂದ 8.30ರವೆರೆಗೆ ಗಣಪತಿ ಪೂಜೆ, ಪುಣ್ಯಾ:ವಾಚನವಿಧಿ, ವಾಸ್ತು ಹೋಮ, ರಕ್ಸೋಘ್ನ ಹೋಮ, ವಾಸ್ತುಬಲಿ, ಬಿಂಬಶುದ್ಧಿ ಪೂಜೆ ನಡೆಯಲಿದೆ.
ಫೆ.18ರಂದು ಗಣಪತಿ ಹೋಮ ನಡೆಯಲಿದ್ದು, 10.10ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠೆ, ನವಗ್ರಹ ಹೋಮ, ದಿಡ್ಡಿಯಮ್ಮನ ಪೂಜೆ ಹಾಗೂ ಮಂಗಳಾರತಿ ನೆರವೇರಲಿದೆ. 19ರಂದು ಫಲಸಮರ್ಪಣೆ, ಗಣಪತಿ ಪೂಜೆ, ಪುಣ್ಯಾಃವಾಚನವಿಧಿ, ಚಂಡಿಕಾ ಹೋಮ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಬಳಿಕ ದಿಡ್ಡಿಯಮ್ಮನ ಪೂಜೆ ಕಳಶಾಭಿಷೇಕ, ಮಹಾಮಂಗಳಾತಿ ಸಂಪನ್ನಗೊಂಡ ನಂತರ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು.
ಹಬ್ಬದ ವಾತಾವರಣ: ಮೂರು ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುವುದರಿಂದ ಪ್ರಮುಖ ಬೀದಿ ಹಾಗೂ ರಸ್ತೆಗಳಲ್ಲಿ ಕೇಸರಿ ತಳಿರು ತೋರಣ ಹಾಗೂ ಬಾವುಟಗಳು ರಾರಾಜಿಸುತ್ತಿವೆ. ದೇವಸ್ಥಾನ ಸೇರಿದಂತೆ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.